ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಹಾಗು ಜೆಡಿಎಸ್ ಮುಖಂಡ ಹೆಚ್ ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮದ್ದೂರು ಶಾಸಕ ಡಿ ಸಿ ತಮ್ಮಣ್ಣ ಮತ್ತು ಮತ್ತಿತರರು ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಕಬಳಿಸಿದ್ದಾರೆ ಎನ್ನಲಾದ 14.04 ಎಕರೆ ಸರ್ಕಾರಿ ಜಮೀನನ್ನು 19 ವರ್ಷಗಳಾದರೂ ಇನ್ನೂ ಏತಕ್ಕಾಗಿ ವಶಪಡ್ಸಿಕೊಳ್ಳಲು ಮುಂದಾಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣದ ಸಂಬಂಧ ನ್ಯಾಯಾಲಯದ ಈ ಹಿಂದಿನ ಆದೇಶದಂತೆ ಖುದ್ದು ಮುಖ್ಯ ಕಾರ್ಯದರ್ಶಿಯವರೇ ಹಾಜರಾಗಿದ್ದರು. ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು.
ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್ ಆರ್ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ವೆಂಕಟೇಶ್ ನಾಯಕ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ಆದೇಶವನ್ನು 2 ತಿಂಗಳಲ್ಲಿ ಜಾರಿಗೊಳಿಸಲಾಗುವುದು ಎಂದು 2020ರಲ್ಲಿ ವಿಭಾಗೀಯ ಪೀಠಕ್ಕೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ತಿಳಿಸಿದ್ದರು. ದುರದೃಷ್ಟಕರವೆಂದರೆ ಆ ಆದೇಶವನ್ನು ಅನುಪಾಲಿಸಲಾಗಿಲ್ಲ. ಆನಂತರ ಲೋಕಾಯುಕ್ತರ ಆದೇಶ ಜಾರಿ ಮಾಡಲು ಹಲವು ಆದೇಶ ಮಾಡಲಾಗಿದೆ. ಲೋಕಾಯುಕ್ತ ಮತ್ತು ವಿಭಾಗೀಯ ಪೀಠದ ಆದೇಶದ ಬಳಿಕವೂ ಸರ್ಕಾರವು ಯಾವುದೇ ಕ್ರಮಕೈಗೊಂಡಿಲ್ಲ.
ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಲಯದ ಮುಂದೆ ಹಾಜರಾಗಲು ಸಮನ್ಸ್ ನೀಡದೆ ಬೇರೆ ದಾರಿ ಇರಲಿಲ್ಲ. ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಅನುಪಾಲನಾ ಅಫಿಡವಿಟ್ ಸಲ್ಲಿಸಿದ್ದಾರೆ. 19 ವರ್ಷ ಕಳೆದರೂ, ಲೋಕಾಯುಕ್ತರು ವರದಿ ಸಲ್ಲಿಸಿದ್ದರೂ ಇದುವೆರೆಗೂ ಸರ್ಕಾರವು ಆದೇಶವನ್ನು ಜಾರಿಗೆ ತಂದಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ