ಬೆಂಗಳೂರು :
ಬಿಪಿಎಲ್ ಕಾರ್ಡ್ದಾರರಂತೆ ಎಪಿಎಲ್ ಕಾರ್ಡು ಹೊಂದಿರುವವರಿಗೂ ಉಚಿತ ಡಯಾಲಿಸಿಸ್ಗೆ ಅವಕಾಶ ಮಾಡಿಕೊಡಲು ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಿದ್ದು ಸದ್ಯದಲ್ಲೇ ಈ ಯೋಜನೆಯ ಕಾರ್ಯಾರಂಭ ಸಾಧ್ಯವಾಗುವ ಭರವಸೆಯಿದೆ ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾರುತಿ ಮಂದಿರ ವಾರ್ಡ್ನಲ್ಲಿ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಕೇಂದ್ರದ ‘ಪ್ರಥಮ ವಾರ್ಷಿಕೋತ್ಸವ’ದಲ್ಲಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಕೇಂದ್ರದಲ್ಲಿ 68 ಡಯಾಲಿಸಿಸ್ ಉಪಕರಣಗಳ ವ್ಯವಸ್ಥೆ ಮಾಡಲು ಸ್ಥಳಾವಕಾಶವಿದ್ದು, ಪ್ರಾರಂಭದಲ್ಲಿ 2 ಉಪಕರಣಗಳಿಂದ ಪ್ರಾರಂಭವಾಗಿ ಇದೀಗ 42 ಉಪಕರಣಗಳು ಕಾರ್ಯ ನಿರ್ವಹಿಸುತ್ತಿದೆ. ಒಂದು ವರ್ಷದಲ್ಲಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ 20,100 ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ನೀಡಲಾಗಿದ್ದು, ಸಾರ್ವಜನಿಕ ಆರೋಗ್ಯ ಸಂಸ್ಥೆಯ ಮೂಲಕ ಅತ್ಯುತ್ತಮ ಸೇವೆ ನೀಡಬಹುದು ಎಂಬುದು ಸಾಧ್ಯವಾಗಿದೆ ಎಂದರು.
ದುಸ್ಥಿತಿಯಲ್ಲಿದ್ದ ಜಾಗವನ್ನು ನ್ಯಾಯಾಲಯದ ಮೂಲಕ ಬಿಬಿಎಂಪಿ ವಶಕ್ಕೆ ತೆÀಗೆದುಕೊಂಡು ಅತ್ಯುತ್ತಮ ಸೌಕರ್ಯಗಳನ್ನು ಹೊಂದಿರುವ ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭಿಸಿದ್ದೇವೆ. ಇದಕ್ಕೆ ಇಲ್ಲಿನ ಜನಪ್ರತಿನಿಧಿಗಳು ಪಟ್ಟ ಕಷ್ಟ ಬಹಳಷ್ಟಿದೆ. ಇನ್ಸ್ಟಿಟ್ಯೂಟ್ ಆಫ್ ನೆಫ್ರೋ ಯುರಾಲಜಿ ಸಂಸ್ಥೆಯ ಮೂಲಕ ಕೇವಲ ಬಿಬಿಎಂಪಿ ವ್ಯಾಪ್ತಿಯ ಅಷ್ಟೇ ಅಲ್ಲದೇ, ಬೆಂಗಳೂರು ಗ್ರಾಮಾಂತರ, ರಾಮನಗರ ಹೀಗೆ ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳು ಇಲ್ಲಿ ಚಿಕಿತ್ಸೆಯ ಫಲವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಈ ಕೇಂದ್ರದಲ್ಲಿ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದರೆ, ಎಪಿಎಲ್ ಕಾರ್ಡ್ ಹೊಂದಿರುವ ರೋಗಿಗಳು 700 ರೂಪಾಯಿಗಳ ಹಣವನ್ನು ಭರಿಸಬೇಕಾಗುತ್ತದೆ. ಇಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿರುವ ರೋಗಿಗಳ ಸಂಖ್ಯೆಯನ್ನು ನೋಡಿದಲ್ಲಿ ಬಹಳಷ್ಟು ಕಡಿಮೆ ಪ್ರಮಾಣದ ಎಪಿಎಲ್ ಕಾರ್ಡ್ದಾರ ರೋಗಿಗಳು ಚಿಕಿತ್ಸೆ ಪಡೆದುಕೊಂಡಿರುವುದು ಕಂಡಬರುತ್ತದೆ. ಈ ಹಿನ್ನೆಲೆಯಲ್ಲಿ ಎಪಿಎಲ್ ಕಾರ್ಡ್ನ ರೋಗಿಗಳಿಗೂ ಉಚಿತ ಚಿಕಿತ್ಸೆಯನ್ನು ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಲಯ ಜಂಟಿ ಆಯುಕ್ತ ಲೋಕನಾಥ್, ಕ್ಲಿನಿಕಲ್ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ. ನಿರ್ಮಲ ಬುಗ್ಗಿ, ವಲಯ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ, ಇನ್ಸ್ಟಿಟ್ಯೂಟ್ ಆಫ್ ನೆಫ್ರೋ ಯುರಾಲಜಿ ಸಂಸ್ಥೆಯ ನಿರ್ದೇಶಕ ಡಾ. ಕೇಶವಮೂರ್ತಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/03/Untitled-15-3.jpg)