ಮೈಸೂರಿನಲ್ಲಿ ಪಂಚರತ್ನ ಸಮಾರೋಪ : ಸಿದ್ಧತೆ ಪರಿಶೀಲಿಸಿದ ಎಚ್‌ಡಿಕೆ

ಮೈಸೂರು:

     ಇದೇ ತಿಂಗಳು 26 ರಂದು ಇಲ್ಲಿನ ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನ ಬೃಹತ್ ಮೈದಾನದಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರೆಯ ಬೃಹತ್ ಸಮಾವೇಶದ ಸಿದ್ಧತಾ ಕೆಲಸಗಳನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವೀಕ್ಷಿಸಿದರು. ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಸೇರುವ ಈ ಬೃಹತ್ ಸಮಾವೇಶದಲ್ಲಿ ಆಸನ, ಊಟ, ಕುಡಿಯುವ ನೀರು, ಪಾರ್ಕಿಂಗ್ ಸೇರಿದಂತೆ ಅನೇಕ ವಿಷಯಗಳ ಕುರಿತಾಗಿ ಪರಿಶೀಲನೆ ನಡೆಸಿದ ಮಾಜಿ ಮುಖ್ಯಮಂತ್ರಿ ಅವರು, ಅಂತಿಮ ಹಂತದ ಸಲಹೆ ಸೂಚನೆಗಳನ್ನು ನೀಡಿದರು.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿಯೇ ಇದೊಂದು ಮಹತ್ವದ ಸಮಾವೇಶ ಆಗಿದ್ದು, ಯಾವುದೇ ಸಣ್ಣ ಸಮಸ್ಯೆಯೂ ಆಗದಂತೆ ನಿರಾತಂಕವಾಗಿ ಸಮಾವೇಶ ನಡೆಯಬೇಕು. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

   ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆಶೀರ್ವಾದ ಮಾಡಲಿ. ಜೆಡಿಎಸ್ ವತಿಯಿಂದ ರಾಜ್ಯದ  ಮೈಸೂರಿನಲ್ಲಿ, ಅದೂ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯುತ್ತ್ತಿದೆ. ಸುಮಾರು 100 ಎಕರೆಯಲ್ಲಿ ಒಂದು ಐತಿಹಾಸಿಕ ಕಾರ್ಯಕ್ರಮ ಮಾಡಲು ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಲಿಕ್ಕೆ ಎಲ್ಲರೂ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದರು.

    ನಮ್ಮ ನಿರೀಕ್ಷೆಗೂ ಮೀರಿ ಈ ಪಂಚರತ್ನ ರಥಯಾತ್ರೆಗೆ ಜನರು ಬೆಂಬಲ ನೀಡಿದ್ದಾರೆ. ನಾನು ಹೋದ ಎಲ್ಲ ಕಡೆ ಆಶೀರ್ವಾದ ಮಾಡಿದ್ದಾರೆ. ಅಂತಿಮವಾಗಿ 10 ಲಕ್ಷ ಜನರ ಸಮಾವೇಶಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಕಾರ್ಯಕ್ರಮ 2023ರ ನಮ್ಮ ಪಕ್ಷದ ಚುನಾವಣೆ ಪ್ರಚಾರಕ್ಕೂ ನಾಂದಿ ಆಗಲಿದೆ. ಈ ಭಾರಿ ರಾಜ್ಯದ ಜನ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಬೆಂಬಲಿಸುತ್ತಾರೆ. ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮ ಯಶಸ್ವಿಯಾಗಲಿ. ನಂತರ ರಾಜ್ಯದಲ್ಲಿ ಬದಲಾವಣೆ ಏನು ಎನ್ನುವುದು ಗೊತ್ತಾಗುತ್ತದೆ. ನಮ್ಮ ಶಾಸಕರು, ನಾಯಕರ ಮೇಲೆ ತಾಯಿ ಅನುಗ್ರಹ ಇರಲಿ ಎಂದೇ ಕಾರ್ಯಕ್ರಮ ಇಲ್ಲಿ ಮಾಡುತ್ತಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಮಾಜಿ ಸಚಿವ ಜಿ.ಟಿ. ದೇವೇಗೌಡ, ಸಾರಾ ಮಹೇಶ್ ಸೇರಿದಂತೆ ಪಕ್ಷದ ಹಲವಾರು ಶಾಸಕರು, ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link