ಕೇಸರಿ ಪಕ್ಷವು ತಮ್ಮ ತಂದೆಗೆ ನೀಡಬೇಕಾದ ಗೌರವವನ್ನು ನೀಡುತ್ತಿಲ್ಲ: ವಿಜೇತ

ಬೆಂಗಳೂರು

     ಬಿಜೆಪಿ ಪಕ್ಷದ ಹಿರಿಯ ಹಾಗೂ ಪ್ರಭಾವಿ ನಾಯಕರಲ್ಲಿ ಒಬ್ಬರಾದ ದಿವಂಗತ ಅನಂತಕುಮಾರ್‌ ಅವರ ಪುತ್ರಿ ವಿಜೇತಾ  ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಸರಿ ಪಕ್ಷವು ತಮ್ಮ ತಂದೆಗೆ ನೀಡಬೇಕಾದ ಗೌರವವನ್ನು ನೀಡುತ್ತಿಲ್ಲ. ರಾಜ್ಯದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ವೇಳೆ ತಂದೆ ಅನಂತಕುಮಾರ್‌ ಅವರನ್ನು ಬಿಜೆಪಿ ಸ್ಮರಿಸಿಲ್ಲ. ಈ ಕುರಿತು ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳುವಂತೆಯೂ ಕೇಳಿಕೊಂಡಿದ್ದಾರೆ.

      ದಿವಂಗತ ಅನಂತಕುಮಾರ್ ಅವರ ಇಬ್ಬರು ಪುತ್ರಿಯರಲ್ಲಿ ಒಬ್ಬರಾದ ವಿಜೇತಾ ಅವರು ಟ್ವಿಟರ್‌ನಲ್ಲಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

     ಅನಂತಕುಮಾರ್‌ಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ. ಇದರಿಂದಾಗಿ ಬಿಜೆಪಿಯ ಒಂದು ವರ್ಗದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ ಎಂಬ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ವಿಜೇತಾ ಈ ಕಾಮೆಂಟ್ ಮಾಡಿದ್ದಾರೆ. ‘ಅಪ್ಪ ( ಕೇಂದ್ರ ಸಚಿವ ದಿವಂಗತ ಅನಂತಕುಮಾರ್‌ ) 1987ರಲ್ಲಿ ಔಪಚಾರಿಕವಾಗಿ ಬಿಜೆಪಿ ಸೇರಿದರು ಮತ್ತು ಕೊನೆಯ ಉಸಿರು ಇರುವವರೆಗೂ ಬಿಜೆಪಿಗಾಗಿ ದುಡಿದರು.

    ಉದ್ಘಾಟನಾ ಕಾರ್ಯಕ್ರಮಗಳು, ರಸ್ತೆಗಳು, ರೈಲು ಮಾರ್ಗಗಳಲ್ಲಿ ಅವರ ಹೆಸರನ್ನು ಇಡದಿರುವುದು ಬೇಸರ ತಂದಿದೆ. ಈ ಮೂಲಕ ಅವರ ಕೊಡುಗೆಗಳನ್ನು ಗುರುತಿಸದಿರುವುದು ಕ್ಷುಲ್ಲಕವಾಗಿದೆ. ಅವರು ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರನ್ನು ಮರೆಯುತ್ತಿರುವ ಪಕ್ಷಕ್ಕೆ ಆತ್ಮಾವಲೋಕನ ಅಗತ್ಯ’ ಎಂದು ವಿಜೇತಾ ಟ್ವೀಟ್‌ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ