ಬೆಂಗಳೂರು
ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಣ್ಣಿಲಾಗುತ್ತಿರುವ ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು ಮೇ 10 ರಂದು ಮತದಾನ ನಡೆಯಲಿದೆ.ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ಮೇ 13 ರಂದು ಮತ ಎಣಿಕೆ ಕಾರ್ಯ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಚುನಾವಣೆಯ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು,ಚುನಾವಣಾ ಆಯೋಗದ ಅನುಮತಿಯಿಲ್ಲದೆ ಯಾವುದೇ ಉದ್ಘಾಟನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಚಾಲನೆ ನೀಡುವಂತಿಲ್ಲ.
ದೆಹಲಿಯ ವಿಜ್ಞಾನ ಭವನದಲ್ಲಿಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಟಿ ನಡೆಸಿ ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿದರು. ಏಪ್ರಿಲ್ 13 ರಂದು ವಿಧಾನಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ.
ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನಾಂಕವಾಗಿದ್ದು,ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆಯಲ್ಲದೆ,ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ.
ಮೇ 10 ರಂದು ಮತದಾನ ನಡೆಯಲಿದ್ದು ಮೇ 13 ರಂದು ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟವಾಗಲಿದೆ ಎಂದ ಅವರು,ಮೇ 15 ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ನುಡಿದರು.ರಾಜ್ಯದಲ್ಲಿ ಈ ಭಾರಿ ಒಟ್ಟು 5,21,73,579 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದು,ಇದರಲ್ಲಿ 2,62,42,561 ಪುರುಷ ಮತದಾರರು,2,59,26,319 ಮಹಿಳಾ ಮತದಾರರಿದ್ದಾರೆ.
47.779 ಸೇವಾ ನಿರತ ಮತದಾರರು,5,55,073 ವಿಕಚ ಚೇತನರು,4,699 ಮಂದಿ ತೃತೀಯ ಲಿಂಗಿಗಳಿದ್ದಾರೆ.ರಾಜ್ಯದಲ್ಲಿ ಈ ಭಾರಿ 58,282 ಮತಗಟ್ಟೆಗಳನ್ನು ತೆರೆಯಲಾಗಿದ್ದು,ನಗರ ಭಾಗಗಳಲ್ಲಿ24.063 ಮತ್ತು ಗ್ರಾಮೀಣ ಭಾಗಗಳಲ್ಲಿ 34,219 ಮತಗಟ್ಟೆಗಳಿವೆ.ಒಂದು ಮತಗಟ್ಟೆಗೆ 883 ಮತದಾರರಿದ್ದು, ಮಹಿಳೆಯರು ನಿರ್ವಹಿಸುವ 1320 ಮತಗಟ್ಟೆಗಳಿರುತ್ತವೆ.
224 ಯುವಸ್ನೇಹಿ ಮತಗಟ್ಟೆಗಳಿದ್ದು,ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 224 ಕ್ಷೇತ್ರಗಳಲ್ಲಿ ಪ್ರತ್ಯೇಕ ಮತಗಟ್ಟೆಗಳಿರಲಿದ್ದು,240 ಮಾದರಿ ಮತಗಟ್ಟೆಗಳಿರುತ್ತವೆ.ಇದೇ ರೀತಿ 29,141 ವೆಬ್ ಕ್ಯಾಸ್ಟಿಂಗ್ ತೆರೆಯಲಾಗುತ್ತದೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಚುನಾವಣಾ ಆಯೋಗ ಈ ಬಾರಿ ಬಿಗಿಯಾದ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ.ವಿಮಾನ ನಿಲ್ದಾಣ,ರಾಷ್ಟ್ರೀಯ ಹೆದ್ದಾರಿಗಳು, ಬಂದರುಗಳು,ಚೆಕ್‌ಪೋಸ್ಟ್ಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು,ರಾತ್ರಿ ಹೊತ್ತು ಎಟಿಎಂಗಳಿಗೆ ಹಣ ತುಂಬದಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
19 ಜಿಲ್ಲೆಗಳಲ್ಲಿ 171 ಅಂತಾರಾಜ್ಯ ಚೆಕ್‌ಪೋಸ್ಟ್ಗಳನ್ನು ತೆರೆಯಲಾಗಿದ್ದು,ಚುನಾವಣೆಯಲ್ಲಿ ಆಕ್ರಮ ತಡೆಯಲು ಎಲ್ಲ ತನಿಖಾ ಸಂಸ್ಥೆಗಳನ್ನು ಬಳಸಲು ತೀರ್ಮಾನಿಸಲಾಗಿದೆ.ಅಬಕಾರಿ ಇಲಾಖೆಯವರು ಚೆಕ್ ಪೋಸ್ಟ್ಗಳಲ್ಲಿ ಸಿಸಿ ಕ್ಯಾಮೆರಾ,ವೆಬ್ ಕ್ಯಾಮೆರಾಗಳನ್ನು ಅಳವಡಿಸಿದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬೇಕು ಎಂದು ಚುನಾವಣಾ ಆಯೋಗ ಸೂಚನೆ ನೀಡಿದೆ.
124 ಚೆಕ್ ಪೋಸ್ಟ್ಗಳನ್ನು ತೆರೆಯಲು ಪೋಲೀಸರಿಗೆ ಸೂಚನೆ ನೀಡಲಾಗಿದೆ.128 ಚೆಕ್ ಪೋಸ್ಟ್,2016 ಫ್ಲೈಯಿಂಗ್ ಸ್ಕ್ವಾ ಡ್,2400 ವೀಕ್ಷಕರ ನೇಮಕ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ನೀಡುವುದು ಇಲ್ಲವೇ ವದಂತಿಗಳನ್ನು ಹರಡುವುದು,ಅಪಪ್ರಚಾರ ನಡೆಸುವುದು ಕಂಡು ಬಂದರೆ ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಈ ಬಾರಿ ಎಂಭತ್ತು ವರ್ಷ ಮೇಲ್ಪಟ್ಟ 12,15,763 ಮತದಾರರಿದ್ದು,16,897 ಮಂದಿ ಶತಾಯುಷಿಗಳಿದ್ದಾರೆ ಎಂದ ಅವರು,ಎಂಭತ್ತು ವರ್ಷ ಮೇಲ್ಪಟ್ಟವರು ಮನೆಯಲ್ಲಿ ಕುಳಿತೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು.
ಏಪ್ರಿಲ್ 1 ಕ್ಕೆ ಅನ್ವಯವಾಗುವಂತೆ 18 ವರ್ಷ ಮೇಲ್ಪಟ್ಟವರು 1,25,406 ಮಂದಿ ಮತದಾನದ ಹಕ್ಕು ಕೋರಿ ಅರ್ಜಿ ಸಲ್ಲಿಸಿದ್ದು,ಇವರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು.ಬುಡಕಟ್ಟು ಜನಾಂಗದವರು,ಕಾಡು ಕುರುಬರು,ಜೇನು ಕುರುಬರುಮತದಾನ ಮಾಡಲು ಪ್ರೋತ್ಸಾಹಿಸುವ ಸಲುವಾಗಿ ಮತಗಟ್ಟೆಗಳನ್ನು ತೆರೆಯಲಾಗುವುದು ಎಂದು ವಿವರ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ