ಚುನಾವಣೆ : ಸಿನಿ ತಾರೆಯರನ್ನು ಸೆಳೆಯಲು ಮುಂದಾದ ರಾಜಕೀಯ ಪಕ್ಷಗಳು…!

ಬೆಂಗಳೂರು:

     ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಮುನ್ನ ಒಂದಷ್ಟು ನಾಯಕರು ಪಕ್ಷ ಬಿಟ್ಟು ಹೋಗುವುದು, ಪಕ್ಷಕ್ಕೆ ಸೇರ್ಪಡೆಯಾಗುವುದು ಸಾಮಾನ್ಯ. ಖ್ಯಾತ ಚಲನಚಿತ್ರ ತಾರೆಯರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು, ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಪಕ್ಷಗಳ ನಾಯಕರು ಪ್ರಯತ್ನಿಸುತ್ತಾರೆ. 

     ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಕಿಚ್ಚ ಸುದೀಪ್ ಮತ್ತು ತೂಗುದೀಪ ದರ್ಶನ್ ಅವರನ್ನು ಹಿಂದಿನಿಂದಲೂ ಪ್ರಮುಖ ಪಕ್ಷಗಳ ನಾಯಕರು ಸಂಪರ್ಕಿಸುತ್ತಿದ್ದರು. ಕೆಲ ಸಮಯದ ಹಿಂದೆ ಕಿಚ್ಚ ಸುದೀಪ್ ಕಾಂಗ್ರೆಸ್ ಗೆ ಸೇರುತ್ತಾರೆ ಎಂದು ಸುದ್ದಿಯಾಗಿತ್ತು. ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ನಂತರ ಕಿಚ್ಚ ಸುದೀಪ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ ಆ ಸುದ್ದಿ ತಣ್ಣಗಾಯಿತು. 

    ಇದೀಗ ಬಂದಿರುವ ಹೊಸ ಸುದ್ದಿ ಕಿಚ್ಚ ಸುದೀಪ್ ಇಂದು ಮಧ್ಯಾಹ್ನ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಾರೆ ಎನ್ನುವುದು. ಇನ್ನು ಅವರ ಒಂದು ಕಾಲದ ಕುಚ್ಚಿಕ್ಕು ಗೆಳೆಯ ದರ್ಶನ್ ತೂಗುದೀಪ ಸಹ ಬಿಜೆಪಿಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ಹಿಟ್ ಚಿತ್ರಗಳನ್ನು ನೀಡಿರುವ ಈ ಇಬ್ಬರು ಕಲಾವಿದರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡಿಗರಿಗೆ ಚಿರಪರಿಚಿತರು. ಅಲ್ಲದೆ ಹಲವು ರಾಜಕೀಯ ನಾಯಕರುಗಳ ಜೊತೆ ಉತ್ತಮ ಒಡನಾಟ, ಬಾಂಧವ್ಯ ಹೊಂದಿದ್ದಾರೆ.

 

 ವದಂತಿಗೆ ತೆರೆಯಳೆಯಲು ಸುದೀಪ್ ಸುದ್ದಿಗೋಷ್ಠಿ:

   ಈ ಎಲ್ಲಾ ವದಂತಿಗಳ ನಡುವೆ ಕಿಚ್ಚ ಸುದೀಪ್ ಅವರು ಇಂದು ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರು ಯಾವ ವಿಷಯದ ಬಗ್ಗೆ ಮಾತನಾಡಲಿದ್ದಾರೆ, ತಮ್ಮ ರಾಜಕೀಯ ನಿಲುವು ಪ್ರಕಟಿಸಲಿದ್ದಾರೆಯೇ ಎಂಬುದನ್ನು ನೋಡಬೇಕಿದೆ. ಇನ್ನೊಂದೆಡೆ ಮತ್ತೊಬ್ಬ ಖ್ಯಾತ ನಟ, ಅಭಿಮಾನಿಗಳ ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ದರ್ಶನ್ ತೂಗುದೀಪ ಸಹ ಬಿಜೆಪಿಗೆ ಸೇರ್ಪಡೆ ಯಾಗಲಿದ್ದಾರೆ ಎಂಬ ವದಂತಿ ಸಹ ಕೇಳಿಬರುತ್ತಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ