ಬೆಂಗಳೂರು:
ಇಂದು ದ್ವಿತೀಯ ಪಿಯುಸಿ ಮೌಲ್ಯಮಾಪನ ಕಾರ್ಯ ಆರಂಭಗೊಳ್ಳಲಿದ್ದು, ರಾಜ್ಯಾದ್ಯಂತ 65 ಕೇಂದ್ರಗಳಲ್ಲಿ 20 ದಿನಗಳ ಕಾಲ ಮೌಲ್ಯಮಾಪನ ಕಾರ್ಯ ನಡೆಯಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾಹಿತಿ ಪ್ರಕಾರ ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ರಾಜ್ಯಾದ್ಯಂತ ಮಾರ್ಚ್ 09 ರಿಂದ 29ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದ್ದು, ನಾಳೆಯಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭಗೊಳ್ಳಲಿದೆ. 20 ದಿನಗಳ ಕಾಲ ನಡೆಯಲಿರುವ ಮೌಲ್ಯಮಾಪನ ಕಾರ್ಯಕ್ಕೆ 25 ಸಾವಿರ ಉಪನ್ಯಾಸಕರನ್ನು ನಿಯೋಜನೆ ಮಾಡಿದ್ದು,
ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಸಲಿದ್ದಾರೆ. ಒಟ್ಟು ದ್ವಿತೀಯ ಪಿಯುಸಿಯಲ್ಲಿ 7.27 ಲಕ್ಷ ವಿದ್ಯಾರ್ಥಿಗಳು 37 ವಿಷಯಗಳಿಗೆ ಪರೀಕ್ಷೆ ಬರೆದಿದ್ದು, 45 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ.
ಆದರೆ, ಮೌಲ್ಯಮಾಪನಕ್ಕೆ ನಿಗದಿಯಾಗಿರುವ ಕೆಲವರನ್ನು ಚುನಾವಣಾ ಕರ್ತವ್ಯಕ್ಕೂ ಬಳಸಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮೌಲ್ಯಮಾಪಕರ ಸಂಖ್ಯೆ ಕಡಿಮೆಯಾಗಬಹುದು ಎನ್ನಲಾಗಿದೆ. ಆದರೆ ಎಷ್ಟು ಸಿಬ್ಬಂದಿ ಕಡಿಮೆಯಾಗಲಿದ್ದಾರೆ ಎನ್ನುವ ಮಾಹಿತಿ ಇದುವರೆಗೂ ಲಭ್ಯವಿಲ್ಲ.
ಒಂದು ವೇಳೆ ಶೇ.20ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮೌಲ್ಯಮಾಪಕರ ಕೊರತೆ ಕಂಡುಬAದಲ್ಲಿ 20 ದಿನದ ಬದಲಿಗೆ 1 ತಿಂಗಳ ಕಾಲ ಮೌಲ್ಯಮಾಪನ ಕಾರ್ಯ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.ಈಗಾಗಲೇ ಮೌಲ್ಯಮಾಪನ ಕಾರ್ಯಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದ್ದು, ನಾಳೆಯಿಂದ ಎಲ್ಲ 65 ಮೌಲ್ಯಮಾಪನ ಕೇಂದ್ರಗಳಲ್ಲಿಯೂ ಉತ್ತರ ಪತ್ರಿಕೆಗಳ ಮೌಲ್ಯಮಾಪಕ ಕಾರ್ಯ ಆರಂಭಗೊಳ್ಳಲಿದೆ. ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವ ಉದ್ದೇಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹೊಂದಿದ್ದು, ಮೇ ಮೊದಲ ವಾರದಲ್ಲೇ ಫಲಿತಾಂಶ ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಮಾಹಿತಿ ನೀಡಿದ್ದಾರೆ.
ಹಾಗಾಗಿ ಬಹುತೇಕ ಮೇ ಮೊದಲ ವಾರದಲ್ಲಿ ಅಥವಾ ರಾಜ್ಯ ವಿಧಾನಸಭಾ ಚುನಾವಣೆಗೂ ಮೊದಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ದಟ್ಟವಾಗಿದೆ.ಇನ್ನು ರಾಜ್ಯದಲ್ಲಿ ಮಾ.9 ರಂದು ದ್ವಿತೀಯ ಪಿಯುಸಿ ಮೊದಲ ಪರೀಕ್ಷೆ ನಡೆದಿತ್ತು. ಮೊದಲ ದಿನದ ಪರೀಕ್ಷೆಗೆ ಒಟ್ಟು 23,771 ವಿದ್ಯಾರ್ಥಿಗಳು ಗೈರಾಗಿದ್ದರು. ಒಟ್ಟು 32 ಜಿಲ್ಲೆಗಳಿಂದ 5,33,797 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಪ್ರಥಮ ಭಾಷೆ ಪರೀಕ್ಷೆಗೆ ಒಟ್ಟು 5,10,026 ವಿದ್ಯಾರ್ಥಿಗಳು ಹಾಜರಾಗಿದ್ದರು. ಒಟ್ಟು 23,771 ವಿದ್ಯಾರ್ಥಿಗಳು ಗೈರಾಗಿದ್ದು, ಶೇಕಡಾ 95.55ರಷ್ಟು ಹಾಜರಾತಿ ಇತ್ತು ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ