ಬೆಂಗಳೂರು:
ನಂದಿನಿ ವರ್ಸಸ್ ಅಮುಲ್ ಕದನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ನಂದಿನಿ ಐಸ್ ಕ್ರೀಂ ಖರೀದಿಸಿ, ಕೆಎಂಎಫ್ “ಕರ್ನಾಟಕದ ಹೆಮ್ಮೆ” ಎಂದು ಬಣ್ಣಿಸಿದ್ದಾರೆ.
ಎರಡು ದಿನಗಳ ರಾಜ್ಯ ಚುನಾವಣೆ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಇಂದು ಬೆಂಗಳೂರಿನ ಜೆ.ಪಿ. ನಗರದಲ್ಲಿ ರಸ್ತೆ ಬದಿಯಲ್ಲಿದ್ದ ಕೆಎಂಎಫ್ ಬೂತ್‌ಗೆ ತೆರಳಿ ನಂದಿನಿ ಪೇಡ ಮತ್ತು ಐಸ್ ಕ್ರೀಂ ಅನ್ನು ಸವಿದರು. ರಾಹುಲ್ ಗಾಂಧಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸಾಥ್ ನೀಡಿದರು.
ಕರ್ನಾಟಕ ಹಾಲು ಒಕ್ಕೂಟದ ಪ್ರಮುಖ ಬ್ರ್ಯಾಂಡ್ ನಂದಿನಿ “ಅತ್ಯುತ್ತಮ” ಬ್ರ್ಯಾಂಡ್ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಂತರ ರಾಹುಲ್ ಗಾಂಧಿ ಅವರು ತಾವು ನಂದಿನಿ ಐಸ್ ಕ್ರೀಮ್ ಖರೀದಿಸಿದ ಫೋಟೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ, “ಕರ್ನಾಟಕದ ಹೆಮ್ಮೆ – ನಂದಿನಿ ಅತ್ಯುತ್ತಮ!” ಎಂದು ಬರೆದಿದ್ದಾರೆ.
