ಬೆಂಗಳೂರು:
ಕಮಿಷನ್ ಆರೋಪದಿಂದ ಸಚಿವ ಸ್ಥಾನ ಕಳೆದುಕೊಂಡ ಕೆ ಎಸ್ ಈಶ್ವರಪ್ಪಗೆ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ 40 ಕಮಿಷನ್ ಆರೋಪವನ್ನು ಅನುಮೋದಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಕಚೇರಿ ದೊಡ್ಡ ಅಪರಾಧ ಎಸಗಿದೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕೆ ಎಸ್ ಈಶ್ವರಪ್ಪಗೆ ಕರೆ ಮಾಡಿದ್ದಾರೆ. ಇದು ಭಾರತ ಇತಿಹಾಸ, ಕರ್ನಾಟಕದ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯಲಿದೆ. ಕರೆ ಮಾಡುವ ಮೂಲಕ ಪಿಎಂ ಶೇ 40ರಷ್ಟು ಭ್ರಷ್ಟಾಚಾರಕ್ಕೆ ಅನುಮೋದನೆ ನೀಡಿದ್ದಾರೆ.
ಪಿಎಂ ಮೋದಿ ರಾಜಕೀಯ ಲಾಭಕ್ಕಾಗಿ ಯಾವುದೇ ಹಂತಕ್ಕೂ ಇಳಿಯಬಹುದು. ಕೆ ಎಸ್ ಈಶ್ವರಪ್ಪ ಅವರಿಗೆ ಕರೆ ಮಾಡಿ ಅದನ್ನು ಸಾಬೀತು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.ಕೆ ಎಸ್ ಈಶ್ವರಪ್ಪ ಜೊತೆ ಮೋದಿ ಮಾತನಾಡಿದ್ದಾರೆ: ಈಶ್ವರಪ್ಪ ಜೊತೆ ಕರೆ ಮಾಡಿ, ನಗು ನಗುತ್ತಾ ಮಾತನಾಡಿದ್ದಾರೆ. ಈಶ್ವರಪ್ಪ ಕಮಿಷನ್ ಆರೋಪದಲ್ಲಿ ಮಂತ್ರಿಗಿರಿಯಿಂದ ವಜಾ ಮಾಡಿಲ್ಲವೇ?.
ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಪತ್ನಿ ಜೊತೆ ಮಾತನಾಡಿದ್ದಾರಾ?. ಅವರ ತಂದೆ ತಾಯಿ ಜೊತೆ ಮಾತನಾಡಿದ್ದಾರಾ?. ಪ್ರಧಾನಿ ಅವರ ಮನೆಗೆ ಹೋಗಿದ್ದಾರಾ?. ಈಶ್ವರಪ್ಪ ಬಿಜೆಪಿ ಮುಖಂಡ ರಾಗಿರಬಹುದು, ಪ್ರಕರಣ ಕೋರ್ಟ್ನಲ್ಲಿದೆ. ಆದರೆ, ಗುತ್ತಿಗೆದಾರ ಸಂತೋಷ್, ಈಶ್ವರಪ್ಪ ಅವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕಾಗಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಜೊತೆ ಮೋದಿ ಮಾತನಾಡಿದ್ದಾರೆ ಎಂದು ಕಿಡಿ ಕಾರಿದರು.
ಫೈಟರ್ ರವಿ ಮುಂದೆ ಕೈ ಮುಗಿದು ಮೋದಿ ನಿಂತಿದ್ದರು: ನನಗೆ ಇದರಿಂದ ನಾಚಿಕೆ ಆಗುತ್ತಿದೆ. ಫೈಟರ್ ರವಿ ಮುಂದೆ ಕೈ ಮುಗಿದು ಮೋದಿ ನಿಂತಿದ್ದರು. ಡಬಲ್ ಇಂಜಿನ್ ಸರ್ಕಾರ ಡಬಲ್ ದ್ರೋಹ ಸರ್ಕಾರವಾಗಿದೆ. ಈಶ್ವರಪ್ಪ ಅವರಿಗೆ ಕರೆ ಮಾಡಿರುವ ಬಗ್ಗೆ ನೀವು ಸ್ಪಷ್ಟೀಕರಣ ನೀಡಬೇಕು. ನಿಮ್ಮ ವರ್ತನೆ ಪಿಎಂ ಕಚೇರಿಯ ಗೌರವಕ್ಕೆ ಚ್ಯುತಿ ತಂದಿದೆ. ನೈತಿಕವಾಗಿ ಪ್ರಧಾನಿ ಕಚೇರಿ ಮೇಲೆ ಪ್ರಶ್ನೆ ಮೂಡಿದೆ ಎಂದಿದ್ದಾರೆ.ಸರ್ಕಾರ
ತಲೆಯಿಂದ ಮುಡಿಯವರೆಗೆ ಭ್ರಷ್ಟಾಚಾರದಿಂದ ಮುಳುಗಿದೆ: ರಾಜ್ಯದ ಜನರ ಮುಂದೆ ಮತ ಕೇಳುವ ನೈತಿಕ ಹಕ್ಕನ್ನು ಪ್ರಧಾನಿ ಮೋದಿ ಕಳೆದುಕೊಂಡಿದ್ದಾರೆ. ಆಯನೂರು ಮಂಜುನಾಥ್, ಶೆಟ್ಟರ್ ಆಗಿರಲಿ, ಅವರ ಹಲವು ಶಾಸಕರು ಬೊಮ್ಮಾಯಿ ಸರ್ಕಾರ ತಲೆಯಿಂದ ಮುಡಿಯವರೆಗೆ ಭ್ರಷ್ಟಾಚಾರದಿಂದ ಮುಳುಗಿದೆ ಎಂದು ಆರೋಪಿಸಿದ್ದಾರೆ. ನೆಹರೂ ಓಲೇಕರ್ ಅವರು ಲಂಚದ ಆರೋಪ ಮಾಡಿದ್ದಾರೆ. ಅದರ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಏನೂ ಹೇಳಿಲ್ಲ ಎಂದು ಟೀಕಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ