ಅಮೃತಸರ:
ಅಮೃತಸರದ ಹೆರಿಟೇಜ್ ಸ್ಟ್ರೀಟ್ ಬಳಿ ಇಂದು ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ಮತ್ತೊಂದು ಸ್ಫೋಟ ಸಂಭವಿಸಿದ್ದು, ಕಳೆದ ಐದು ದಿನಗಳಲ್ಲಿ ಸಂಭವಿಸಿದ ಮೂರನೇ ಸ್ಫೋಟ ಇದಾಗಿದೆ.
ಅಮೃತಸರದಲ್ಲಿ ಸರಣಿ ಬಾಂಬ್ ಸ್ಫೋಟದಿಂದ ಜನ ಆತಂಕಗೊಂಡಿದ್ದು, ಸ್ಫೋಟಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ.ಇಂದು ಸಂಭವಿಸಿದ ಸ್ಫೋಟದಲ್ಲಿ ಯಾರೂ ಗಾಯಗೊಂಡಿಲ್ಲ ಅಥವಾ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಮೇ 6 ರಂದು ಮೊದಲ ಸ್ಫೋಟ ಸಂಭವಿಸಿದ್ದು, ಕಳೆದ ಸೋಮವಾರ ಎರಡನೆ ಸ್ಫೋಟ ಸಂಭವಿಸಿದೆ. ಇಂದು ನಡೆದ ಕಡಿಮೆ ತೀವ್ರತೆಯ ಸ್ಫೋಟದ ಸ್ಥಳವು ನಗರದ ಜನಪ್ರಿಯ ಪ್ರವಾಸಿ ತಾಣವಾದ ಗೋಲ್ಡನ್ ಟೆಂಪಲ್ ಬಳಿಯ ಹೆರಿಟೇಜ್ ಸ್ಟ್ರೀಟ್ನಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಮತ್ತು ಪಂಜಾಬ್ ಪೊಲೀಸರು ಸ್ಫೋಟದ ಸ್ಥಳದಲ್ಲಿ ವಿಧಿವಿಜ್ಞಾನ ಮಾದರಿಗಳನ್ನು ಸಂಗ್ರಹಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಗಾಯಗೊಂಡಿದ್ದರು. ಸ್ಥಳದಲ್ಲಿ ಯಾವುದೇ ಡಿಟೋನೇಟರ್ ಪತ್ತೆಯಾಗಿಲ್ಲ. ಆದರೆ ಸ್ಫೋಟಕ್ಕೆ ಬಳಸಿದ ಡಿಟೋನೇಟರ್ ಅನ್ನು ಕಂಟೇನರ್ನಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.








