ಬೆಂಗಳೂರು:
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಇದಕ್ಕೆ ಚುನಾವಣಾ ಸಂದರ್ಭದಲ್ಲಿ ಕೈ ಪಾಳಯ ರೂಪಿಸಿದ ಹೊಸ – ಹೊಸ ಕಾರ್ಯತಂತ್ರಗಳು, ಮತ್ತು ನಿರೂಪಣೆಗಳು ಸಹ ಪ್ರಮುಖ ಕಾರಣವಾಗಿವೆ.
ಆಡಳಿತಾರೂಢ ಬಿಜೆಪಿ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್ ಸಮರ್ಥವಾಗಿ ಜನರ ಮುಂದೆ ಬಿಂಬಿಸುವಲ್ಲಿಯೂ ಯಶ ಕಂಡಿದೆ.ಇತ್ತೀಚೆಗಷ್ಟೇ ಕ್ಯಾಬಿನೆಟ್ ಅನುಮೋದನೆಯನ್ನು ಪಡೆದಿರುವ 5 ಗ್ಯಾರಂಟಿಗಳು ಕೂಡ ಪ್ರಚಾರದ ವೇಳೆ ಕಾಂಗ್ರೆಸ್ ಪರ ಅಲೆ ಏಳುವಂತೆ ಮಾಡಿತ್ತು. ಕರ್ನಾಟಕದಲ್ಲಿ ಅಮೋಘ ವಿಜಯ ಸಾಧಿಸಿರುವ ಕಾಂಗ್ರೆಸ್ ಇದೀಗ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಈ ಚುನಾವಣೆಗೊ ರಾಜ್ಯದಲ್ಲಿ ಅನುಸರಿಸಿದ ಮಾರ್ಗವನ್ನೇ ಅನುಸರಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸರ್ಕಾರದ ವಿರುದ್ಧ ತಂತ್ರ ರೂಪಿಸುವಲ್ಲಿ ಕಾಂಗ್ರೆಸ್ ಯಶಸ್ಸು ಗಳಿಸುತ್ತಿದ್ದು, ಕರ್ನಾಟಕದಲ್ಲಿ ಫಲ ನೀಡಿದ ತಂತ್ರಗಳನ್ನು ಲೋಕಸಭಾ ಚುನಾವಣೆಯಲ್ಲೂ ಬಳಸಿದರೆ ಅದೂ ಕೂಡ ಫಲ ನೀಡುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ.
ಇದರೊಂದಿಗೆ ಲೋಕಸಭೆ ಚುನಾವಣೆಗೂ ಮುನ್ನ ಭ್ರಷ್ಟಾಚಾರದ ವಿಷಯದಲ್ಲಿ ಪಕ್ಷದ ನಿಲುವು ಬದಲಾಗುವುದಿಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್ ಸಾರಿದೆ.
ಸದ್ಯಕ್ಕೆ ಕರ್ನಾಟಕದಿಂದ ಒಬ್ಬರೇ ಸಂಸದರಿರುವುದರಿಂದ 28 ಲೋಕಸಭಾ ಸ್ಥಾನಗಳಲ್ಲಿ 15-18 ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ಪಾಳಯದ ತಂತ್ರಜ್ಞರು ಯೋಜನೆ ರೂಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಈ ಫಲಿತಾಂಶಗಳು ನಾಯಕರ ನಡುವಿನ ಒಗ್ಗಟ್ಟಿನ ಮೇಲೆ ಮತ್ತು ಖಾತರಿಗಳು ಎಷ್ಟು ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2019 ರ ಲೋಕಸಭೆ ಚುನಾವಣೆಯಲ್ಲಿ, ಕರ್ನಾಟಕದಲ್ಲಿ ಬಿಜೆಪಿ ಸ್ಪರ್ಧಿಸಿದ್ದ 27 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆದ್ದು 51.75 ಶೇಕಡಾ ಮತಗಳನ್ನು ಗಳಿಸಿತ್ತು. ಕಾಂಗ್ರೆಸ್ 1 (ಶೇ. 32.11 ಮತ ಹಂಚಿಕೆ) ಮತ್ತು ಜೆಡಿಎಸ್ 1 (ಶೇ. 9.74) ಸ್ಥಾನದಲ್ಲಿ ಮಾತ್ರ ಗೆಲವು ಸಾಧಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ