ಜೆಡಿಎಸ್‌ ವಿಸರ್ಜನೆ : ಸಂಸ್ಕಾರಹೀನರಿಗೆ ನನ್ನ ಪ್ರಗಾಡ ಸಂತಾಪ : ಹೆಚ್‌ ಡಿ ಕೆ

ಬೆಂಗಳೂರು:

     ಪಕ್ಷ ವಿಸರ್ಜನೆ, ಅಂತಿಮ ಸಂಸ್ಕಾರದ ಹೇಳಿಕೆ ಕೊಟ್ಟ ಸಂಸ್ಕಾರಹೀನರಿಗೆ ಹೇಳುವುದು ಇಷ್ಟೇ. ನನಗೆ 123 ಸೀಟು ಬಂದಿಲ್ಲ, ಪಂಚರತ್ನ ಜಾರಿಗೆ ಜನರು ಅವಕಾಶವನ್ನೂ ಕೊಟ್ಟಿಲ್ಲ, ಹಾಗಾಗಿ ಪಕ್ಷವನ್ನು ವಿಸರ್ಜನೆ ಮಾಡುವುದೂ ಇಲ್ಲ. ಇನ್ನೇನಾದರೂ ಅನುಮಾನ ಇದ್ದವರು ಬರಲಿ, ಅಂಥವರ ಅಜ್ಞಾನ ಹೋಗಲಾಡಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು,  ಚುನಾವಣೆ ಫಲಿತಾಂಶ ಬಂದಿದೆ, ನನಗೆ ಜನರು 123 ಕ್ಷೇತ್ರ ಕೊಡಲಿಲ್ಲ. ಈಗ ಪಂಚರತ್ನ ಜಾರಿ ಹಾಗೂ ಪಕ್ಷ ವಿಸರ್ಜನೆ ಪ್ರಶ್ನೆ ಎಲ್ಲಿ? ಸಾಮಾನ್ಯಜ್ಞಾನವೇ ಇಲ್ಲದ ಸಚಿವರಿಗೆ ಈ ಪರಿ ಅಜ್ಞಾನವಿದೆ ಎಂದು ನಾನಂತೂ ಎಣಿಸಿರಲಿಲ್ಲ. ಇಷ್ಟು ಅವಿವೇಕವುಳ್ಳ ಇವರ ಮುಂದಿನ ಆಡಳಿತದ ಈಗಲೇ ಆತಂಕವಾಗುತ್ತಿದೆ ಎಂದು ಚಾಟಿ ಬೀಸಿದ್ದಾರೆ.

    ಅವರೆಲ್ಲರ ಅಜ್ಞಾನಕ್ಕೆ ನನ್ನ ಪ್ರಗಾಢ ಸಾಂತ್ವನವಿದೆ. ಅವರ ಕನ್ನಡ ಭಾಷಾಜ್ಞಾನದ ಬಗ್ಗೆ ಕಾಳಜಿ ಇದೆ. ಆ ಮಹಾಶಯರು ನನ್ನ ಹೇಳಿಕೆಗಳನ್ನೊಮ್ಮೆ ತಿಳಿಯಲಿ. ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿವೆ. ಕನ್ನಡ ಓದಲು ಬಾರದಿದ್ದರೆ ನನ್ನ ಬಳಿ ಬರಲಿ, ಮನದಟ್ಟು ಆಗುವ ರೀತಿ ಹೇಳುತ್ತೇನೆ. ಕನ್ನಡವನ್ನೂ ಕಲಿಸುತ್ತೇನೆ ಎಂದು ಹೇಳಿದ್ದಾರೆ.

    ವಿಧಾನಸಭೆ ಚುನಾವಣೆಯಲ್ಲಿ ಸೋತರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅವರು ಯಾವಾಗ ವಿಸರ್ಜನೆ ಮಾಡುತ್ತಾರೆ? ಪಕ್ಷಕ್ಕೆ ಯಾವಾಗ ಅಂತಿಮ ಸಂಸ್ಕಾರ ಮಾಡುತ್ತಾರೆ? ಎಂದು ಕೆಲ ಅರೆಬೆಂದ ಸಚಿವರು, ಶಾಸಕರು ಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ.  ಕೆಲವರ ವಿವೇಕರಹಿತ ಹೇಳಿಕೆಗಳಿಗೆ ಉತ್ತರಿಸುವುದು ಬೇಡ ಭಾವಿಸಿದ್ದೆ. ನಾನು ಸೋತ ನೋವಿನಲ್ಲಿದ್ದೇನೆ. ಕಾಂಗ್ರೆಸ್ ನವರು ಗೆದ್ದ ಅಹಂನಲ್ಲಿ ಇದ್ದಾರೆ. ಅಹಂ ಅಳಿಯುತ್ತದೆ ಅನ್ನುವ ಕನಿಷ್ಠ ಅರಿವು ಅವರಿಗೆ ಇದ್ದಂತೆ ಇಲ್ಲ. ಆ ಅರಿವು ಬರುವ ಕಾಲವೂ ದೂರವಿಲ್ಲ. ಕಾಯುವ ತಾಳ್ಮೆ ನನಗಿದೆ ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link