ಬೆಂಗಳೂರು:
ರಾಜ್ಯಾದ್ಯಂತ ಜನರು ಕಾತುರದಿಂದ ಕಾಯುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಶುಕ್ರವಾರ ಮಹತ್ವದ ಸಚಿವ ಸಂಪುಟ ನಡೆಯಲಿದ್ದು, ಉಚಿತ ಪ್ರಯಾಣ ಸೇರಿದಂತೆ 5 ಯೋಜನೆಗಳ ಅಧಿಕೃತ ಆರಂಭ ಕುರಿತು ಘೋಷಣೆ ಹೊರಬೀಳುವ ನಿರೀಕ್ಷೆಗಳಿವೆ.
ಈ ನಡುವಲ್ಲೇ ಉಚಿತ ಬಸ್ ಪ್ರಯಾಣ ಕುರಿತು ಸರ್ಕಾರದ ಘೋಷಣೆಗಾಗಿ ಕಾದು ಕುಳಿತಿರುವ ರಾಜ್ಯದ ಮಹಿಳೆಯರು, ಮಾಸಿಕ ಬಸ್ ಪಾಸ್ ಗಳ ಖರೀದಿಯಿಂದ ಹಿಂದೆ ಸರಿದು, ಟಿಕೆಟ್ ಗಳನ್ನು ಖರೀದಿ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತರುವ ವಿಶ್ವಾಸವಿದ್ದು, ಘೋಷಣೆಗಾಗಿ ಕಾಯುತ್ತಿದ್ದೇವೆಂದು ಮಹಿಳಾ ಮಣಿಗಳು ಹೇಳುತ್ತಿದ್ದಾರೆ.
ಎಂಜಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಹೌಸ್ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಮಾಲತಿ ಎಂಬುವವರು, ಅಜಾದ್ ನಗರದಿಂದ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಾರೆ.
ಪ್ರತೀ ತಿಂಗಳೂ ಮಾಸಿಕ ಪಾಸ್ ಖರೀದಿ ಮಾಡುತ್ತಿದ್ದೆ. ಮೇ.31 ರಂದು ಪಾಸ್ ಅಂತಿಮಗೊಂಡಿತ್ತು. ಸಾಮಾನ್ಯವಾಗಿ ಪ್ರತೀ ತಿಂಗಳೂ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ತಿಂಗಳ 30ನೇ ತಾರೀಖಿನಂದು ಪಾಸ್ ಖರೀದಿ ಮಾಡತ್ತಿದ್ದೆ. ಸರ್ಕಾರ ಉಚಿತ ಪ್ರಯಾಣ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಯೋಜನೆ ಜಾರಿಗಾಗಿ ಕಾಯುತ್ತಿದ್ದೇನೆ. ಹೀಗಾಗಿ ಟಿಕೆಟ್ ಖರೀದಿ ಮಾಡಿ ಪ್ರಯಾಣಿಸುತ್ತಿದ್ದೇನೆಂದು ಹೇಳಿದ್ದಾರೆ.
ಕೇವಲ ನಾನಷ್ಟೇ ಅಲ್ಲ, ಸಾಕಷ್ಟು ಮಹಿಳೆಯರೂ ಕೂಡ ಇದೇ ರೀತಿ ಮಾಡುತ್ತಿದ್ದಾರೆ. 70 ರೂಪಾಯಿಗಳ ದೈನಂದಿನ ಪಾಸ್ಗಳನ್ನು ಖರೀದಿಸುತ್ತಿದ್ದಾರೆ. ಪ್ರಯಾಣ ದರ 70 ರೂಪಾಯಿಗಿಂತ ಕಡಿಮೆಯಿದ್ದರೆ ಟಿಕೆಟ್ಗಳನ್ನು ಖರೀದಿಸುತ್ತಿದ್ದಾರೆಂದು ತಿಳಿಸಿದ್ದಾರೆ.
ಯೋಜನೆಗಳ ಕುರಿತ ವರದಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಸಲ್ಲಿಸಿದ್ದು, ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆಂದು ಸಾರಿಗೆ ನಿಗಮದ ಮೂಲಗಳು ಮಾಹಿತಿ ನೀಡಿವೆ.
ಉಚಿತ ಪ್ರಯಾಣ ಯೋಜನೆಯಿಂದ ಸರ್ಕಾರಕ್ಕೆ 3,500 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತಾದರೂ, ಅಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ 4,200 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬಸ್ ನಿಗಮಗಳ ಅಧಿಕಾರಿಗಳು ಸೂಚಿಸಿರುವ ಮೂರು ಆಯ್ಕೆಗಳಲ್ಲಿ ಒಂದನ್ನು ಸಿದ್ದರಾಮಯ್ಯ ಮತ್ತು ರಾಮಲಿಂಗಾ ರೆಡ್ಡಿ ಅವರು ಆಯ್ಕೆ ಮಾಡಿ ಉಚಿತ ಪ್ರಯಾಣದ ಘೋಷಣೆ ಮಾಡುವ ನಿರೀಕ್ಷೆಯಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ