ಮಹಳೆಯರಿಗೆ ಉಚಿತ ಬಸ್‌ ಪ್ರಯಾಣ : ಮೆಟ್ರೋ ಆದಾಯ ನಷ್ಟ ಸಾಧ್ಯತೆ

ಬೆಂಗಳೂರು

     ಕರ್ನಾಟಕದಲ್ಲಿ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸ್ ಘೋಷಣೆ ಮಾಡಿದ 5 ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಸಹ ಒಂದು. ಈ ಘೋಷಣೆ ಈಗ ಆಟೋ, ಖಾಸಗಿ ಬಸ್ ಮತ್ತು ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋದ ಆತಂಕಕ್ಕೆ ಕಾರಣವಾಗಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿಗಳ ಬಗ್ಗೆ ಘೋಷಣೆಯಾಗಲಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈಗಾಗಲೇ ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಯಾವುದೇ ಷರತ್ತು ಇಲ್ಲ ಎಂದು ಹೇಳಿದ್ದಾರೆ.

     ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆಯಡಿ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದೆ. ಈ ಸೌಲಭ್ಯ ಬೆಂಗಳೂರು ನಗರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಿಗೆ ಸಹ ಅನ್ವಯವಾಗುತ್ತದೆ. 

    ಬೆಂಗಳೂರು ನಗರದ ಜನರ ಜೀವನಾಡಿ ಬಿಎಂಟಿಸಿ ಬಸ್ ಮತ್ತು ನಮ್ಮ ಮೆಟ್ರೋ. ನಮ್ಮ ಮೆಟ್ರೋದಲ್ಲಿ ಪ್ರತಿದಿನ ಸುಮಾರು 5.80 ಲಕ್ಷ ಜನರು ಸಂಚಾರ ನಡೆಸುತ್ತಾರೆ. ಇವರಲ್ಲಿ ಸುಮಾರು 2.5 ಲಕ್ಷ ಮಹಿಳಾ ಪ್ರಯಾಣಿಕರು. ಮಹಿಳೆಯರನ್ನು ಸೆಳೆಯಲು ಮೆಟ್ರೋ ಪ್ರತಿ ರೈಲಿನಲ್ಲಿಯೂ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ ಆಳವಡಿಕೆ ಮಾಡಿದೆ. 

     ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಘೋಷಣೆ ಜಾರಿಗೆ ಬಂದರೆ ಮಹಿಳಾ ಪ್ರಯಾಣಿಕರು ಬಿಎಂಟಿಸಿ ಬಸ್‌ನತ್ತ ಆಕರ್ಷಣೆಗೊಂಡು ಮೆಟ್ರೋದಿಂದ ದೂರ ಸರಿಯುವ ನಿರೀಕ್ಷೆ ಇದೆ. ಇದರಿಂದಾಗಿ ಮೆಟ್ರೋ ಪ್ರಯಾಣಿಕರ ಕೊರತೆ ಎದುರಿಸಬಹುದು ಎಂಬ ಆತಂಕ ಎದುರಾಗಿದೆ.

     ಬಿಎಂಆರ್‌ಸಿಎಲ್‌ ಈ ವರ್ಷದ ಅಂತ್ಯದ ವೇಳೆಗೆ ಕೆ. ಆರ್. ಪುರ-ಬೈಯಪ್ಪನಹಳ್ಳಿ, ಆರ್. ವಿ. ರಸ್ತೆ-ಬೊಮ್ಮಸಂದ್ರ, ನಾಗಸಂದ್ರ-ಬಿಐಇಸಿ ನಡುವೆ ನಮ್ಮ ಮೆಟ್ರೋ ಸಂಚಾರ ಆರಂಭಿಸಿ ಹೆಚ್ಚು ಪ್ರಯಾಣಿಕರನ್ನು ಸೆಳೆಯಲು ಮುಂದಾಗಿದೆ. ಆದರೆ ಈಗ ಕಾಂಗ್ರೆಸ್‌ನ ಗ್ಯಾರಂಟಿ ಬಿಎಂಆರ್‌ಸಿಎಲ್‌ಗೆ ಮಹಿಳಾ ಪ್ರಯಾಣಿಕರು ದೂರವಾಗುತ್ತಾರೆ ಎಂಬ ಆತಂಕ ತಂದಿದೆ. ನಮ್ಮ ಮೆಟ್ರೋ ರೈಲು ಬೆಂಗಳೂರು ನಗರದಲ್ಲಿ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ.

    ಬಿಎಂಆರ್‌ಸಿಎಲ್ ನಿರೀಕ್ಷೆಯಂತೆ ಮೆಟ್ರೋ ಆದಾಯ ಸಂಗ್ರಹವಾಗುತ್ತಿಲ್ಲ. ನಷ್ಟದಲ್ಲಿರುವ ನಿಗಮಕ್ಕೆ ಈಗ ಮಹಿಳಾ ಪ್ರಯಾಣಿಕರು ಬಸ್‌ಗಳತ್ತ ಸಾಗಿದರೆ ಇನ್ನಷ್ಟು ನಷ್ಟವಾಗಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಜಾರಿಗೆ ಬಂದರೂ ಸಹ ಬಿಎಂಟಿಸಿಗೆ ಲಾಭವೇನು ಆಗುವುದಿಲ್ಲ. ನಗರದಲ್ಲಿ 5 ಸಾವಿರಕ್ಕೂ ಅಧಿಕ ಬಸ್‌ಗಳು ಪ್ರತಿನಿತ್ಯ ರಸ್ತೆಗೆ ತಿಳಿಯುತ್ತವೆ. ಬಿಎಂಟಿಸಿಯೂ ಲಾಭದಲ್ಲಿ ಇಲ್ಲ. ಮಹಿಳಾ ಪ್ರಯಾಣಿಕರ ಸಂಖ್ಯೆ ಅಧಿಕವಾದರೂ ಉಚಿತ ಪ್ರಯಾಣವಾದ ಕಾರಣ ಸಂಸ್ಥೆಗೆ ಲಾಭ ಬರುವುದಿಲ್ಲ.

    ಉದ್ಯೋಗ, ವ್ಯಾಸಂಗ ಹೀಗೆ ವಿವಿಧ ಕಾರಣಗಳಿಗೆ ಸಂಚಾರ ನಡೆಸುವ ಹಲವು ಮಹಿಳೆಯರು ಮೆಟ್ರೋ ಮತ್ತು ಬಸ್ ಎರಡೂ ಸಾರಿಗೆಗಳನ್ನು ಉಪಯೋಗ ಮಾಡುತ್ತಾರೆ. ಈಗ ಬಸ್‌ನಲ್ಲಿ ಉಚಿತ ಪ್ರಯಾಣ ಆರಂಭಗೊಂಡರೆ ಮೆಟ್ರೋ ಹತ್ತದೇ ಬಸ್‌ನಲ್ಲಿಯೇ ಸಂಚಾರ ಮುಂದುವರೆಬಹುದು ಎಂಬುದು ನಮ್ಮ ಮೆಟ್ರೋದ ಆತಂಕವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link