ಬೆಂಗಳೂರು:
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದಿರುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್, ಇದೇ ವೇಗದಲ್ಲಿ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಬಿಜೆಪಿಯಿಂದ ಈಗಾಗಲೇ ಚುನಾವಣೆಗೆ ಸಿದ್ದತೆ ನಡೆಯುತ್ತಿದ್ದು, ಪ್ರಾಥಮಿಕ ಹಂತದ ಗ್ರೌಂಡ್ ರಿಪೋರ್ಟ್ ಬಿಜೆಪಿ ಹೈಕಮಾಂಡ್ ಕೈಸೇರಿದೆ ಎಂದು ವರದಿಯಾಗಿದೆ.
ಕಳೆದ ಬಾರಿ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲಲು ಶಕ್ತವಾಗಿತ್ತು. ಪ್ರಧಾನಿ ಮೋದಿಯ ಅಲೆ ಹಿಂದಿನಂತಿಲ್ಲ ಎನ್ನುವುದು ಹಲವು ಸಮೀಕ್ಷೆಗಳಲ್ಲಿ ಈಗಾಗಲೇ ಉಲ್ಲೇಖವಾಗಿದೆ. ಇದರ ಜೊತೆಗೆ, ರಾಹುಲ್ ಗಾಂಧಿ ಕೂಡಾ ತಮ್ಮ ಭಾರತ್ ಜೋಡೋ ಯಾತ್ರೆಯ ಮೂಲಕ ತಮ್ಮ ವರ್ಚಸ್ಸನ್ನು ವೃದ್ದಿಸಿಕೊಂಡಿದ್ದಾರೆ ಎನ್ನುತ್ತದೆ ಸರ್ವೇ ವರದಿಗಳು.
ಹಲವು ಕ್ಷೇತ್ರಗಳಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿಗಳು ಮತ್ತೆ ಕಣಕ್ಕಿಳಿಯುವ ಬಗ್ಗೆ ಉತ್ಸುಕತೆ ತೋರದೇ ಇರುವುದರಿಂದ, ಹೊಸ ಮುಖಗಳಿಗೆ ಕಾಂಗ್ರೆಸ್ ಮಣೆ ಹಾಕಬೇಕಿದೆ. ಈ ಸಂಬಂಧ, ಸಂಭಾವ್ಯರ ಪಟ್ಟಿಯನ್ನು ರೆಡಿ ಮಾಡಿಕೊಂಡಿದೆ. ಈ ಪಟ್ಟಿಯ ಜೊತೆಗೆ ಸ್ಥಳೀಯ ಮುಖಂಡರ ಅಭಿಪ್ರಾಯಗಳನ್ನು ಪಡೆದು ಪಟ್ಟಿಯಲ್ಲಿ ಬದಲಾವಣೆಯನ್ನು ತರುವ ಯೋಜನೆ ಕಾಂಗ್ರೆಸ್ಸಿನದು.
ಯುವ ಸಮುದಾಯಕ್ಕೆ ಮಣೆ ಹಾಕುವ ಲೆಕ್ಕಾಚಾರವನ್ನು ಕೆಪಿಸಿಸಿ ಅಧ್ಯಕ್ಷರು ಹೊಂದಿದ್ದಾರೆ ಎನ್ನುವ ಸುದ್ದಿಯಿದೆ. ಎಲ್ಲೆಲ್ಲಿ ಅಭ್ಯರ್ಥಿಗಳ ಕೊರತೆ ಎದುರಾಗುತ್ತಿದೆಯೋ ಅಲ್ಲಲ್ಲಿ ಬಿಜೆಪಿ ನಾಯಕರನ್ನು ಸೆಳೆಯುವ ಬಗ್ಗೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಪ್ರಮುಖವಾಗಿ, ಲಿಂಗಾಯತ ಮತಬ್ಯಾಂಕ್ ಮೇಲೆ ಕಾಂಗ್ರೆಸ್ ನಾಯಕರ ಕಣ್ಣು ನೆಟ್ಟಿದೆ.
28ಕ್ಷೇತ್ರಗಳ ಪೈಕಿ ಏಳು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ ಎಂದು ಕನ್ನಡ ದೈನಿಕ ವರದಿ ಮಾಡಿದೆ. ಅವುಗಳೆಂದರೆ, ಕೋಲಾರ, ವಿಜಯಪುರ, ಉಡುಪಿ-ಚಿಕ್ಕಮಗಳೂರು, ಹಾಸನ, ರಾಯಚೂರು, ಕೊಪ್ಪಳ ಮತ್ತು ಚಿಕ್ಕೋಡಿ. 21 ಕ್ಷೇತ್ರದಲ್ಲಿ ಚರ್ಚೆಯಲ್ಲಿರುವ ಸಂಭಾವ್ಯರ ಪಟ್ಟಿ ಈ ರೀತಿಯಿದೆ:
1. ದಕ್ಷಿಣ ಕನ್ನಡ : ಮಿಥುನ್ ರೈ / ವಿನಯ್ ಕುಮಾರ್ ಸೊರಕೆ,2. ಮಂಡ್ಯ : ರಮ್ಯಾ,3. ಮೈಸೂರು : ಡಾ.ಯತೀಂದ್ರ ಸಿದ್ದರಾಮಯ್ಯ / ಸೂರಜ್ ಹೆಗ್ಡೆ / ಐಶ್ವರ್ಯ ಮಹದೇವಪ್ಪ,4. ಶಿವಮೊಗ್ಗ : ಗೀತಾ ಶಿವರಾಜ್ ಕುಮಾರ್ / ಸುಂದರೇಶ್,5. ಬೆಂಗಳೂರು ಗ್ರಾಮಾಂತರ : ಡಿ.ಕೆ.ಸುರೇಶ್,6. ಚಿಕ್ಕಬಳ್ಳಾಪುರ : ರಕ್ಷಾ ರಾಮಯ್ಯ / ಹರ್ಷ ಮೊಯ್ಲಿ,7. ಬೆಂಗಳೂರು ಉತ್ತರ : ರಾಜೀವ್ ಗೌಡ / ಕೃಷ್ಣ ಭೈರೇಗೌಡ / ಜಿ.ಸಿ.ಚಂದ್ರಶೇಖರ,8. ಬೆಂಗಳೂರು ಸೆಂಟ್ರಲ್ : ಮನ್ಸೂರ್ ಖಾನ್ / ಮೊಹಮ್ಮದ್ ನಲಪಾಡ್,9. ಬೆಂಗಳೂರು ದಕ್ಷಿಣ : ಬಿ.ಕೆ.ಹರಿಪ್ರಸಾದ್ / ದಿನೇಶ್ ಗುಂಡೂರಾವ್ / ಸೌಮ್ಯಾ ರೆಡ್ಡಿ,10. ಚಾಮರಾಜ ನಗರ : ನಂಜುಂಡಸ್ವಾಮಿ / ಸುನೀಲ್ ಬೋಸ್,11. ಹುಬ್ಬಳ್ಳಿ – ಧಾರವಾಡ : ಜಗದೀಶ್ ಶೆಟ್ಟರ್ / ವಿನಯ್ ಕುಲ್ಕರ್ಣಿ / ಶಂಕರ ಪಾಟೀಲ್ ಮೆನೇನಕೊಪ್ಪ,12. ಕಲಬುರಗಿ : ಮಲ್ಲಿಕಾರ್ಜುನ ಖರ್ಗೆ,13. ಬೀದರ್ : ವಿಜಯ್ ಸಿಂಗ್/ ರಾಜಶೇಖರ ಪಾಟೀಲ್,14. ದಾವಣಗೆರೆ : ಮಂಜಪ್ಪ,15. ಚಿತ್ರದುರ್ಗ : ಬಿ.ಎನ್.ಚಂದ್ರಪ್ಪ,16. ಉತ್ತರ ಕನ್ನಡ : ಪ್ರಶಾಂತ್ ದೇಶಪಾಂಡೆ / ರವೀಂದ್ರ ನಾಯ್ಕ್,17. ಬೆಳಗಾವಿ : ಪ್ರಿಯಾಂಕ ಸತೀಶ್ ಜಾರಕಿಹೊಳಿ ಅಥವಾ ಜಾರಕಿಹೊಳಿ ಕುಟುಂಬದ ಸದಸ್ಯರೊಬ್ಬರು,18. ಬಳ್ಳಾರಿ : ವಿ.ಎಸ್. ಉಗ್ರಪ್ಪ,19. ಹಾವೇರಿ : ಸಲೀಂ ಅಹಮದ್,20. ತುಮಕೂರು : ನಿಕೇತ್ ರಾಜ್ ಮೌರ್ಯ / ಸಂತೋಷ್ ಜಯಚಂದ್ರ,21. ಬಾಗಲಕೋಟೆ : ವೀಣಾ ಕಾಶಪ್ಪನವರ್,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ