ಚೆನ್ನೈ:
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಕುರಿತು ನೀಡಿರುವ ಹೇಳಿಕೆಯಿಂದಾಗಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಣ್ಣಾಮಲೈ ಅವರ “ಬೇಜವಾಬ್ದಾರಿ ಮತ್ತು ಅಪಕ್ವ” ಹೇಳಿಕೆಗಾಗಿ ಅವರನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ ಪಳನಿಸ್ವಾಮಿ ಅವರು ಮಂಗಳವಾರ ತರಾಟೆಗೆ ತೆಗೆದುಕೊಂಡರು.
ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷರು ದುರುದ್ದೇಶದಿಂದ ಅಪಪ್ರಚಾರ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಜಯಲಲಿತಾ ಕುರಿತ ಟೀಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಪಳನಿಸ್ವಾಮಿ, “ಅಣ್ಣಾಮಲೈ ಅವರ ಹೇಳಿಕೆಯು ಬೇಜವಾಬ್ದಾರಿಯಾಗಿದೆ, ರಾಜಕೀಯ ಅನುಭವ ಮತ್ತು ಪ್ರಬುದ್ಧತೆಯ ಕೊರತೆಯಿದೆ. ನಾವು ಅದನ್ನು ಬಲವಾಗಿ ಖಂಡಿಸುತ್ತೇವೆ” ಎಂದು ಹೇಳಿದರು.
ಕ್ರಾಂತಿಕಾರಿ ನಾಯಕಿ ಮತ್ತು ಇಧಯ ದೈವಂ ಖ್ಯಾತಿಗೆ ಯೋಜಿತ ರೀತಿಯಲ್ಲಿ ಕಳಂಕ ತಂದಿದ್ದಕ್ಕಾಗಿ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳು ಬಿಜೆಪಿ ಮುಖ್ಯಸ್ಥರ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಪಳನಿಸ್ವಾಮಿ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇದೇ ಮೊದಲ ಬಾರಿಗೆ ನಿರ್ಣಯ ಅಂಗೀಕರಿಸಲಾಯಿತು.