ನವದೆಹಲಿ/ತೈಪೆ :
ದೇಶದ ಪೂರ್ವ ಕರಾವಳಿ ವ್ಯಾಪ್ತಿಯಲ್ಲಿ ರಷ್ಯಾದ ಎರಡು ಯುದ್ಧ ನೌಕೆಗಳು ಇರುವುದನ್ನು ಪತ್ತೆ ಮಾಡಲಾಗಿದೆ. ಅವುಗಳ ಚಲನವಲನದ ಮೇಲೆ ನಿಗಾ ಇಡಲು ಲಘು ವಿಮಾನಗಳು ಹಾಗೂ ಕಣ್ಗಾವಲು ನೌಕೆಗಳನ್ನು ನಿಯೋಜಿಸಲಾಗಿದೆ ಎಂದು ತೈವಾನ್ನ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.
ರಾತ್ರಿ 11ರ ವೇಳೆಗೆ ನಮ್ಮ ಪೂರ್ವ ತೀರದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಸಂಚರಿಸುತ್ತಿದ್ದಾಗ ರಷ್ಯಾ ನೌಕೆಗಳನ್ನು ಪತ್ತೆ ಮಾಡಲಾಗಿದೆ ಎಂದು ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.ತೈವಾನ್ ತೀರದಿಂದ ಎಷ್ಟು ದೂರದಲ್ಲಿವೆ ಎಂಬುದನ್ನು ಖಚಿತವಾಗಿ ಹೇಳಿಲ್ಲ.
ಚೀನಾ ನೌಕೆಗಳು ತನ್ನ ಸಮುದ್ರ ಪ್ರದೇಶದಲ್ಲಿ ನಿತ್ಯ ಕಾಣಿಸಿಕೊಳ್ಳುತ್ತವೆ ಎಂದು ದ್ವೀಪ ರಾಷ್ಟ್ರವಾಗಿರುವ ತೈವಾನ್ನಲ್ಲಿ ವರದಿಯಾಗುತ್ತಿರುತ್ತದೆ. ಆದರೆ, ಈ ದ್ವೀಪವು (ತೈವಾನ್) ತನ್ನದೇ ಭೂ ಪ್ರದೇಶ ಎಂದು ಹೇಳಿಕೊಂಡಿರುವ ಚೀನಾ, ಅಗತ್ಯಬಿದ್ದರೆ ಮುಂದೊಂದು ದಿನ ಬಲವಂತವಾಗಿ ವಶಪಡಿಸಿಕೊಳ್ಳುತ್ತೇವೆ ಎಂದು ಎಚ್ಚರಿಸಿದೆ.
ರಷ್ಯಾ ನೌಕೆಗಳು ತೈವಾನ್ ತೀರದಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.ರಷ್ಯಾ ಸೇನಾ ಪಡೆಗಳು ಉಕ್ರೇನ್ನಲ್ಲಿ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಸಂಘರ್ಷ ನಡೆಸುತ್ತಿವೆ. ಇದರ ನಡುವೆ ಖಾಸಗಿ ಸೇನಾ ಪಡೆ ‘ವ್ಯಾಗ್ನರ್’ ಗುಂಪು, ರಷ್ಯಾ ಸೇನಾ ನಾಯಕತ್ವದ ವಿರುದ್ಧ ಕಳೆದವಾರ ದಂಗೆ ಎದ್ದಿತ್ತು.
ಈ ಬೆಳವಣಿಗೆಗಳ ಬೆನ್ನಲ್ಲೇ ರಷ್ಯಾ ನೌಕೆಗಳು ತೈವಾನ್ ತೀರದಲ್ಲಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.