ಬೆಂಗಳೂರು:
ಒತ್ತುವರಿದಾರರಿಂದ ಮರು ವಶಕ್ಕೆ ಪಡೆದ ಸರ್ಕಾರಿ ಜಮೀನುಗಳ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳನ್ನೇ ಬಳಸಿಕೊಂಡು ‘ಬೀಟ್ ವ್ಯವಸ್ಥೆ’ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಹೇಳಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರದ ವೇಳೆ ಬಿಜೆಪಿ ಸದಸ್ಯ ವೈ.ಎ.ನಾರಾಯಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಕೆಲ ಕಡೆ ತೆರವು ಮಾಡಿದ್ದ ಜಮೀನುಗಳು ಮತ್ತೆ ಕಬಳಿಕೆಯಾಗಿವೆ. ಹೀಗಾಗಿ ಇನ್ನು ಮುಂದೆ ಒತ್ತುವರಿ ತೆರವುಗೊಳಿಸಿದ ಜಮೀನುಗಳ ಬಗ್ಗೆ ನಿಗಾವಹಿಸಲು ಪೊಲೀಸರ ಬೀಟ್ ಮಾದರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳನ್ನು ಬಳಸಿಕೊಂಡು ಬೀಟ್ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸರ್ಕಾರಿ ಭೂಮಿ ಒತ್ತುವರಿ ಎಲ್ಲ ಸರ್ಕಾರಗಳ ಆಡಳಿತದ ಅವಧಿಯಲ್ಲೂ ಇತ್ತು. ಒತ್ತುವರಿ ತೆರವು ಸರ್ಕಾರದ ಇಚ್ಛಾಶಕ್ತಿಯ ಮೇಲೆ ನಡೆಯುತ್ತದೆ. ಇರುವ ಕಾನೂನುಗಳನ್ನೇ ಬಳಸಿಕೊಂಡು ವ್ಯವಸ್ಥಿತವಾಗಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರತಿ ತಿಂಗಳು ಒತ್ತುವರಿ ತೆರವು ಅಭಿಯಾನ ನಡೆಸಲಾಗುವುದು. ಅಧಿಕಾರಿಗಳಿಗೆ ಗುರಿ ನಿಗದಿ ಪಡಿಸಿ ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗಿರುವ ಸರ್ಕಾರಿ ಜಮೀನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.