ನವದೆಹಲಿ:
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಎನ್‌ಡಿಎ ಸಭೆಯಲ್ಲಿ 38 ಪಕ್ಷಗಳು ಭಾಗಿಯಾಗಲಿದೆ ಎಂದು ಹೇಳಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಕಿಡಿಕಾರಿರುವ ಎಎಪಿ ಇಡಿ ದಾಳಿಗಳ ಭೀತಿಯಿಂದಾಗಿ ಹಲವು ಪಕ್ಷಗಳು ಎನ್‌ಡಿಎ ಕೂಟ ಸೇರಿವೆ ಎಂದು ಕಿಡಿಕಾರಿದೆ.
ಇನ್ನು ಜೆಪಿ ನಡ್ಡಾ ಅವರು ವಿರೋಧ ಪಕ್ಷದ ನಾಯಕರ ಒಗ್ಗಟ್ಟಿನ ಪ್ರಯತ್ನಗಳನ್ನು ‘ಸ್ವಾರ್ಥ” ವ್ಯಾಯಾಮ ಎಂದು ಬಣ್ಣಿಸಿದ್ದು, ಸುಮಾರು 20 ಲಕ್ಷ ಕೋಟಿ ಮೊತ್ತದ ವಿವಿಧ ಭ್ರಷ್ಟಾಚಾರ ಪ್ರಕರಣಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಾಡಿಕೊಂಡಿರುವ ಸ್ವಾರ್ಥದ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಎಎಪಿಯ ರಾಜ್ಯಸಭಾ ಸದಸ್ಯ ಮತ್ತು ರಾಷ್ಟ್ರೀಯ ವಕ್ತಾರ ರಾಘವ್ ಚಡ್ಡಾ 38 ಪಕ್ಷ ಎನ್‌ಡಿಎ. ಇಡಿ ದಾಳಿ ಭೀತಿ ಪಕ್ಷಗಳು ನಿಮ್ಮ ಕೂಟ ಸೇರಿದೆ ಎಂದು ಟ್ವೀಟ್ ಮಾಡಿದ್ದಾರೆ.
ನವದೆಹಲಿಯಲ್ಲಿ ಎನ್‌ಡಿಎ ಸಭೆ ನಡೆಯುತ್ತಿದ್ದು ಪಕ್ಷದ ನಾಯಕರು ಸಭೆಯಲ್ಲಿ ಭಾಗಿ ಯಾಗಿದ್ದಾರೆ. 2024ರಲ್ಲಿ ಬಿಜೆಪಿಯನ್ನು ಸೋಲಿಸಲು ಜಂಟಿ ಕಾರ್ಯತಂತ್ರವನ್ನು ರೂಪಿಸಲು ಬೆಂಗಳೂರಿನಲ್ಲಿ ಕಾಂಗ್ರೆಸ್, ಜೆಡಿಯು, ಎಎಪಿ, ಟಿಎಂಸಿ, ಎನ್‌ಸಿಪಿ, ಎಸ್‌ಪಿ ಮತ್ತು ಡಿಎಂಕೆ ಸೇರಿದಂತೆ 26 ವಿರೋಧ ಪಕ್ಷಗಳ ನಿರ್ಣಾಯಕ ಸಭೆ ನಡೆದಿದ್ದು ಇದೇ ದಿನ ಎನ್‌ಡಿಎ ಸಹ ತಮ್ಮ ಬಲಾಬಲ ತೋರಿಸಲು ಸಭೆ ನಡೆಸುತ್ತಿದೆ.








