ನವದೆಹಲಿ:
ವಿಜಯ್ ಮಲ್ಯ ಮತ್ತು ನೀರವ್ ಮೋದಿ ಸೇರಿದಂತೆ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ಆರೋಪಿಗಳಿಂದ 15,113 ಕೋಟಿ ರೂ.ಗಳನ್ನು ಸರ್ಕಾರ ವಸೂಲಿ ಮಾಡಿದೆ ಮತ್ತು ಆ ಹಣವನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ನೀಡಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
ಪ್ರತಿಯೊಬ್ಬ ಆರೋಪಿಯಿಂದ ವಸೂಲಿಯಾದ ನಿಖರ ಮೊತ್ತದ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಪರಾರಿಯಾಗಿರುವ 19 ಮಂದಿಯ ಪೈಕಿ ಮಲ್ಯ, ಮೋದಿ, ನಿತಿನ್ ಜಯಂತಿಲಾಲ್ ಸಂದೇಸರ, ಚೇತನ್ ಜಯಂತಿಲಾಲ್ ಸಂದೇಸರ, ದೀಪ್ತಿ ಚೇತನ್ ಜಯಂತಿಲಾಲ್ ಸಂದೇಸರ, ಹಿತೇಶ್ ಕುಮಾರ್ ನರೇಂದ್ರಭಾಯಿ ಪಟೇಲ್, ಜುನೈದ್ ಇಕ್ಬಾಲ್ ಮೆಮನ್, ಹಜ್ರಾ ಇಕ್ಬಾಲ್ ಮೆಮನ್, ಆಸಿಫ್ ಇಕ್ಬಾಲ್ ಮೆಮನ್ ಮತ್ತು ರಾಮಚಂದ್ರನ್ ವಿಶ್ವನಾಥನ್ ಸೇರಿದಂತೆ ಹತ್ತು ಮಂದಿಯನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಎಂದು ಘೋಷಿಸಲಾಗಿದೆ. ಈ ಹತ್ತು ಜನ ಸುಮಾರು 40,000 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.