ಬೆಂಗಳೂರು:
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆ ಆರಂಭದ ನಂತರ ಆಗುತ್ತಿರುವ ವ್ಯಾಪಾರ ನಷ್ಟವನ್ನು ಸರಿದೂಗಿಸಲು ರಾಜ್ಯ ಸರ್ಕಾರಕ್ಕೆ ಖಾಸಗಿ ಬಸ್, ಕ್ಯಾಬ್ ಮತ್ತು ಆಟೋ ಒಕ್ಕೂಟಗಳು ನೀಡಿದ್ದ ಗಡುವಿನ ಅವಧಿಯನ್ನು ಆಗಸ್ಟ್ 10 ರಿಂದ ಆಗಸ್ಟ್ 18 ರವರೆಗೆ ವಿಸ್ತರಿಸಿವೆ.
ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಬ್ಯಾನರ್‌ನಡಿಯಲ್ಲಿ ಕಾರ್ಮಿಕ ಸಂಘಟನೆಗಳು ಜುಲೈ 27 ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದವು. ಆದರೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಎರಡು ಹಂತದ ಸಭೆ ನಡೆದು ಆಗಸ್ಟ್ 10 ರವರೆಗೆ ಬಂದ್ ನಡೆಸದಂತೆ ಮನವಿ ಮಾಡಲಾಗಿತ್ತು.
ಸರ್ಕಾರಿ ಬಸ್ ಗಳಲ್ಲಿ ಇರುವಂತೆ ಖಾಸಗಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಬಿಲ್ ಕಟ್ಟಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತೀರ್ಮಾನ ತೆಗೆದುಕೊಳ್ಳಬೇಕಾಗಿದ್ದು, ಅವರೊಂದಿಗೆ ಸಭೆ ನಡೆಸಲಾಗುವುದು ಎಂದು ಒಕ್ಕೂಟಕ್ಕೆ ಭರವಸೆ ನೀಡಲಾಗಿದೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಒಕ್ಕೂಟದ ನಾಮನಿರ್ದೇಶಿತ ಅಧ್ಯಕ್ಷರು, ಸರ್ಕಾರಕ್ಕೆ ನೀಡಲಾದ ಅಂತಿಮ ಗಡುವು ಆಗಸ್ಟ್ 10 ರಂದು ಕೊನೆಗೊಳ್ಳುತ್ತಿದ್ದಂತೆ ನಾವು ಬುಧವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರು, ಸಚಿವರ ಭೇಟಿಯಲ್ಲಿ ನಿರತರಾಗಿದ್ದು, ನಮ್ಮನ್ನು ಆಗಸ್ಟ್ 18 ರವರೆಗೆ ಕಾಯುವಂತೆ ಹೇಳಿದ್ದಾರೆ. ಭರವಸೆಯ ಆಧಾರದ ಮೇಲೆ ನಾವು ಆಗಸ್ಟ್ 18 ರವರೆಗೆ ಗಡುವಿನ ಅವಧಿಯನ್ನು ವಿಸ್ತರಿಸಿದ್ದೇವೆ ಎಂದು ತಿಳಿಸಿದರು.
ಶಕ್ತಿ ಯೋಜನೆ ಜಾರಿಯಾದ ನಂತರ ಖಾಸಗಿ ಸಾರಿಗೆ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ರೆಡ್ಡಿ ಮಾಹಿತಿ ನೀಡಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷರು ತಿಳಿಸಿದರು. ”ಉಚಿತ ಪ್ರಯಾಣ ಯೋಜನೆಯಿಂದ ಆಗಿರುವ ನಷ್ಟದ ಪ್ರಮಾಣವನ್ನು ತಿಳಿಯಲು ಸಾರಿಗೆ ಇಲಾಖೆ ಅಧಿಕಾರಿಗಳು ಸಹ ಕೆಲಸ ಮಾಡುತ್ತಿದ್ದಾರೆ. ನಮ್ಮ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ, ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಪರಿಹಾರ ನೀಡುವಂತೆ ಆದಾಯ ನಷ್ಟದ ಮಾಹಿತಿಯೊಂದಿಗೆ ಬರುವಂತೆ ಸಾರಿಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.