ಕಲಬುರಗಿ:
ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆ ಮಾಡುವ ಉದ್ದೇಶದಿಂದ “ಜನಸ್ನೇಹಿ ಪೊಲೀಸ್ ಅಭಿಯಾನ” ಆರಂಭಿಸಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ಕಲಬುರಗಿ ನಗರದ ಪೊಲೀಸ್ ಭವನದಲ್ಲಿ ಜನಸ್ನೇಹಿ ಅಭಿಯಾನ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸಾರ್ವಜನಿಕರೊಂದಿಗೆ ಸ್ಪಂದಿಸುವ ಕುರಿತು ಸಾರ್ವಜನಿಕರೇ ಮುಕ್ತವಾಗಿ ಪ್ರತಿಕ್ರಿಯಿಸುವ “ಪೊಲೀಸ್ ಫೀಡ್ ಬ್ಯಾಕ್ ಆಪ್” ಕ್ಯೂ ಆರ್ ಕೋಡ್ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಡೆ ನುಡಿಯಲ್ಲಿ ಪಾರದರ್ಶಕತೆ, ಕಟ್ಟುನಿಟ್ಟಿನ ಕರ್ತವ್ಯ ಪ್ರಜ್ಞೆ, ನಮ್ಮ ವರ್ತನೆ ಸರಿ ಇದ್ದಾಗ ಮಾತ್ರ ಜನಸಾಮಾನ್ಯರು ನಮ್ಮನ್ನು ನಂಬುತ್ತಾರೆ ಎಂದರು.
ಸಮಸ್ಯೆಗಳ ಪರಿಹಾರಕ್ಕಾಗಿ, ನ್ಯಾಯಕ್ಕಾಗಿ ದೂರು ಸಲ್ಲಿಸಲು, ವ್ಯಾಜ್ಯ ಪರಿಹಾರಕ್ಕಾಗಿ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರೊಡನೆ ಜನಸ್ನೇಹಿಯಾಗಿ ವರ್ತಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿದೆ ಎಂದರು.
ಪೊಲೀಸ್ ವ್ಯವಸ್ಥೆಯನ್ನು ಜನ ಸ್ನೇಹಿಯಾಗಿಸುವತ್ತ ಮಹತ್ವಾಕಾಂಕ್ಷಿ ಹೆಜ್ಜೆ ಇರಿಸಲಾಗಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಠಾಣೆಗೆ ಬರುವ ಜನಸಾಮಾನ್ಯರು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವರ್ತನೆ ಕುರಿತಂತೆ ಕ್ಯೂ.ಆರ್.ಕೋಡ್ ಮೂಲಕ ದಾಖಲಿಸಬಹುದಾಗಿದೆ.
ಈ ಕೋಡ್ ಅಳವಡಿಕೆ ಹಿಂದೆ ನಿಮ್ಮ ಕರ್ತವ್ಯ ನಿರ್ವಹಣೆ ಕಣ್ಗಾವಲು ಜೊತೆಗೆ ಜನಸಾಮಾನ್ಯರ ಹಿತಾಸಕ್ತಿ ಸಿಗುತ್ತದೆ. ಕ್ಯೂ.ಆರ್.ಕೋಡನ್ನು ಕಲಬುರಗಿ ನಗರದ ಮತ್ತು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕರಿಗೆ ಕಾಣುವಂತೆ ಪ್ರವೇಶ ದ್ವಾರದಲ್ಲಿಯೇ ಪೋಸ್ಟರ್ ಅಂಟಿಸಬೇಕು. ಅಲ್ಲದೇ ಜಿಲ್ಲೆಯ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಕೂಡ ಇಲಾಖೆ ವತಿಯಿಂದ ಲಗತ್ತಿಸಬೇಕು ಎಂದರು.








