ಬೆಂಗಳೂರು:
ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯಿಂದ ಕೆಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಸಿಟಿ ರವಿಯವರು ಪ್ರತಿಕ್ರಿಯೆ ನೀಡಿದ್ದಾರೆ.ಕಾಂಗ್ರೆಸ್ ಸೇರುವ ಸಲುವಾಗಿ ಯಾವುದೇ ನಾಯಕರೂ ಬಿಜೆಪಿ ತೊರೆಯುತ್ತಿಲ್ಲ ಎಂದು ಬಿಜೆಪಿ ನಾಯಕ ಸಿಟಿ ಸಿಟಿ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಎಲ್ಲಾ ನಾಯಕರ ಮೇಲೆ ನನಗೆ ನಂಬಿಕೆ ಇದೆ. ಪಕ್ಷಾಂತರಗೊಳ್ಳುವ ಕುರಿತು ಯಾವುದೇ ನಾಯಕರೂ ಚಿಂತನೆ ನಡೆಸುತ್ತಿಲ್ಲ. ನಾನು ಸಮಚಿತ್ತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಂಬುವ ವ್ಯಕ್ತಿ. ನಾನು ಯಾವುದೇ ನಿರ್ಧಾರವನ್ನೂ ತರಾತುರಿಯಲ್ಲಿ ತೆಗೆದುಕೊಳ್ಳುವುದಿಲ್ಲ. ಈ ಹೊತ್ತಿನಲ್ಲಿ ನನಗೆ ನಮ್ಮ ಎಲ್ಲ ನಾಯಕರ ಮೇಲೆ ನಂಬಿಕೆ ಇದೆ. ಯಾವುದೇ ಪುರಾವೆಗಳಿಲ್ಲದೆ ಯಾರನ್ನಾದರೂ ಅನುಮಾನಿಸುವುದು ತಪ್ಪು ಎಂದು ಹೇಳಿದರು.
ಸಿ.ಟಿ.ರವಿಗೆ ಟ್ರೀಟ್‌ಮೆಂಟ್ ಕೊಡಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ, ನಾನು ರೋಗಿಯೂ ಅಲ್ಲ, ಅವರು ಡಾಕ್ಟರೂ ಅಲ್ಲ. ಅಜ್ಜಯ್ಯನ ಹೇಳಿಕೆಯೂ ನನ್ನದಲ್ಲ ನನ್ನಲ್ಲಿ ಕೊರತೆ ಇರುವುದನ್ನು ಅವರು ತುಂಬಬೇಕು ಅಂತಾದರೆ ಅವರ 1,500 ಕೋಟಿ ವೈಟ್ ಮನಿಯನ್ನು ನನಗೆ ಟ್ರಾನ್ಸ್ ಫರ್ ಮಾಡಬೇಕು, ಆದರೆ, ಅದು ನನಗೆ ಖಂಡಿತಾ ಬೇಡ ಅವರ ಕೋಟಿ ಗಳಿಕೆಯ ಸಿದ್ಧ ವಿದ್ಯೆಯನ್ನು ಜನರಿಗೆ, ಕೃಷಿಕರಿಗೆ ಹೇಳಿ ಕೊಟ್ಟರೆ ಜನ ದೇವರು ಎಂದು ಭಾವಿಸುತ್ತಾರೆ” ಎಂದರು.
“ಡಿ.ಕೆ. ಶಿವಕುಮಾರ್ ಆ ದಿನಗಳನ್ನು ನೆನಪು ಮಾಡಿಕೊಳ್ಳಬಾರದು ಅವರು ರಾಜ್ಯದ ಡಿಸಿಎಂ. ಮುಂದೆ ಸಿಎಂ ಆಗುವ ಬಯಕೆ, ಪ್ರಯತ್ನ ಮಾಡುತ್ತಿರುವವರು. ಇನ್ನೂ ಆ ದಿನಗಳ ಮೂಡ್ನಲ್ಲೇ ಇದ್ದಾರೆ? ಎಲ್ಲರೂ ಒಪ್ಪಿಕೊಳ್ಳುವ ಕ್ಯಾರೆಕ್ಟರ್ ಆಗಿ ಬದಲಾಗಬೇಕು. 50:50 ಒಪ್ಪಂದವೂ ಆಗಿದೆ ಎಂದು ತಿಳಿದುಬಂದಿದೆ. ಡಿಕೆಶಿ ಎಸ್.ಎಂ ಕೃಷ್ಣ ರೀತಿ ಅಕ್ಸೆಪ್ಟಬಲ್ ರಾಜಕಾರಣಿ ಆಗಬೇಕು.
ಇನ್ನೂ ಆ ದಿನಗಳ ಮೋಡ್‌ನಲ್ಲೇ ಇರಬಾರದು. ಆ ದಿನಗಳು ನಿಮಗೂ ಗೊತ್ತು, ನನಗೂ ಗೊತ್ತು, ಅದನ್ನ ನನ್ನಿಂದ ಹೇಳಿಸಬೇಡಿ. ನಾನು ಡಿಕೆಶಿಯಷ್ಟು ದೊಡ್ಡವನಲ್ಲ, ಆರ್ಥಿಕ ಸಮರ್ಥನಲ್ಲಯ ಆದರೂ ಹಿತೈಷಿಯಾಗಿ ಹೇಳುತ್ತಿದ್ದೇನೆ ಅವರು ಡಿಸಿಎಂ ಎಂದು ಅರಿತುಕೊಂಡು ನಡೆಯಬೇಕು. ಅವರಷ್ಟು ಅಧಿಕಾರ ನನ್ನ ಬಳಿ ಇಲ್ಲ, ಅವರಷ್ಟು ಶ್ರೀಮಂತ ನಾನಲ್ಲ” ಎಂದು ತಿಳಿಸಿದರು.
“ಕಂಟ್ರಾಕ್ಟರ್ಗಳು ಕಮಿಷನ್ ಆರೋಪವನ್ನು ವಾಪಸ್ ಪಡೆದಿರುವ ವಿಚಾರವಾಗಿ ಮಾತನಾಡಿ, ಅವರು ಯಾವ ಕಾರಣಕ್ಕೆ ವಾಪಸ್ ಪಡೆದಿದ್ದಾರೆ ಗೊತ್ತಿಲ್ಲ ಅವರ ಆರೋಪದ ಮೇಲೆ ನಾವು ಪ್ರತಿಕ್ರಿಯೆ ಕೊಟ್ಟಿದ್ದೇವೆ. ಸರ್ಕಾರದ ಒಳ ವ್ಯವಹಾರ ಬಹಿರಂಗ ಆಗಲು ಬಹಳ ಕಾಲ ಬೇಕಾಗಿಲ್ಲ. ಆರೋಪ ನಾವು ಮಾಡಿಲ್ಲ, ಗುತ್ತಿಗೆದಾರರೇ ಆರೋಪ ಮಾಡಿದ್ದು, ಅವರಿಗೆ ಯಾವ ಟ್ರೀಟ್ ಮೆಂಟ್ ಕೊಟ್ಟಿದ್ದಾರೋ ಗೊತ್ತಿಲ್ಲ” ಎಂದು ವ್ಯಂಗ್ಯವಾಡಿದರು.
ಎನ್ಇಪಿ ರದ್ದುಪಡಿಸುವ ಕುರಿತು ಸಿಎಂ ಹೇಳಿಕೆ ಬಗ್ಗೆ ಮಾತನಾಡಿ, “ಯಾವ ಕಾರಣಕ್ಕೆ ಎನ್ಇಪಿ ತಿರಸ್ಕಾರ ಮಾಡುತ್ತೀರಿ? ಕಾಂಪ್ರೆಹೆನ್ಸಿವ್ ಪಾಲಿಸಿ ಬಗ್ಗೆ ನಿಮ್ಮ ವಿರೋಧ ಇದ್ಯಾ? ಯಾವ ಅಂಶದ ಬಗ್ಗೆ ನಿಮ್ಮ ವಿರೋಧ ಇದೆ ಅಂತಾ ಸ್ಪಷ್ಟಪಡಿಸಿ. ಕಸ್ತೂರಿ ರಂಗನ್ ಅವರ ಬಗ್ಗೆ ನಿಮ್ಮ ವಿರೋಧ ಇದೆಯೋ ಅಥವಾ ಅವರು ತಂದ ಪಾಲಿಸಿ ಬಗ್ಗೆಯೋ, ಮೆಕಾಲೆ ಮತ್ತು ಕಾರ್ಲ್ ಮಾರ್ಕ್ಸ್ ಪ್ರಭಾವದಿಂದ ಹೊರಬರಬಾರದು ಅಂತಾ ಇದ್ಯಾ? ಗುಲಾಮಿ ಮನಸ್ಥಿತಿಯಿಂದ ಹೊರಬರಲು ಸಿದ್ಧವಿಲ್ಲದ ಉದ್ದೇಶ ಇದ್ಯಾ? ನಿಮ್ಮ ನಿರ್ಣಯ ರಾಷ್ಟ್ರ ಹಿತಕ್ಕೆ ಘಾತಕ” ಎಂದರು.