ಬೆಂಗಳೂರು
ರಾಜ್ಯದ ಕಾಂಗ್ರೆಸ್ ಸರಕಾರವು ಪೂರ್ವಾಪರ ವಿವೇಚನೆ ಇಲ್ಲದೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ. ಇದು ಖಂಡನಾರ್ಹ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ?ಜಗನ್ನಾಥ ಭವನ?ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಭಾಗದ ರೈತರಿಗೆ ಅನ್ಯಾಯ ಮಾಡಲಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು. ರಾಜ್ಯದ ನೀರಾವರಿ ಸಚಿವರು ಮತ್ತು ಕೃಷಿ ಸಚಿವರಿಗೆ ರಾಜ್ಯದ ರೈತರ ಕುರಿತು ಕಾಳಜಿ ಇಲ್ಲ ಎಂದು ಅವರು ಟೀಕಿಸಿದರು. ತಮಿಳುನಾಡು ಸರಕಾರವು ರಿಟ್ ಅರ್ಜಿ ದಾಖಲಿಸಿದ ತಕ್ಷಣವೇ ಯಥೇಚ್ಛವಾಗಿ ನೀರು ಬಿಟ್ಟಿದ್ದಾರೆ. ಸುಮಾರು 12-13 ಟಿಎಂಸಿ ನೀರನ್ನು ಬಿಡಲಾಗಿದೆ ಎಂದು ಟೀಕಿಸಿದರು.
ತಮಿಳುನಾಡಿಗೆ ಕುರುವೈ ಬೆಳೆಗೆ 32 ಟಿಎಂಸಿ ಮಾತ್ರ ನೀರನ್ನು ಕೊಡಬೇಕಿದೆ. 1.8 ಲಕ್ಷ ಹೆಕ್ಟೇರ್ನಲ್ಲಿ ಮಾತ್ರ ಬೆಳೆ ಬೆಳೆಯಬೇಕೆಂದು ಸೂಚಿಸಿದೆ. ಆದರೆ, ಅರ್ಜಿ ಹಾಕುವುದಕ್ಕೆ ಮೊದಲು 7.4 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದು ತಮಿಳುನಾಡಿನ ಡ್ಯಾಂನಲ್ಲಿದ್ದ 30-32 ಟಿಎಂಸಿ ನೀರನ್ನು ಖಾಲಿ ಮಾಡಿ, ಸುಪ್ರೀಂ ಕೋರ್ಟಿಗೆ ನೀರಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಎಂ.ಬಿ.ಪಾಟೀಲ್, ಬಸವರಾಜ ಬೊಮ್ಮಾಯಿಯವರು ನೀರಾವರಿ ಸಚಿವರಾಗಿದ್ದಾಗ ಇದೇ ರೀತಿ ಸಂಕಷ್ಟ ಬಂದಿತ್ತು. ಬಸವರಾಜ ಬೊಮ್ಮಾಯಿಯವರು ನೀರಾವರಿ ಸಚಿವರಾಗಿದ್ದಾಗ ಸಮಸ್ಯೆ ಬಂದಿತ್ತು. ಆಗ ತಮಿಳುನಾಡಿದ ಬೆಳೆ ಪ್ರಮಾಣದ ವಿವರವನ್ನು ಪಡೆದು ಸುಪ್ರೀಂ ಕೋರ್ಟಿಗೆ ಸಲ್ಲಿಸಿ ಸ್ಟೇ ಪಡೆಯಲಾಗಿತ್ತು ಎಂದು ವಿವರಿಸಿದರು.
ಇವತ್ತಿನ ನೀರಾವರಿ ಸಚಿವರಿಗೆ ಜವಾಬ್ದಾರಿಯೇ ಇಲ್ಲ. ತಮಿಳುನಾಡು ಅರ್ಜಿ ಹಾಕಿದಾಕ್ಷಣ ನೀರು ಬಿಡುಗಡೆ ಮಾಡಿ, ರೈತರು ಬೇಕಿದ್ದರೆ ಸುಪ್ರೀಂ ಕೋರ್ಟಿಗೆ ಹೋಗಿ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ ಎಂದು ಟೀಕಿಸಿದರು. ಕೇಂದ್ರ ಸರಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಕೃಷಿ ಸಚಿವರು ನೀರು ಬಿಡುಗಡೆ ಸಾಧ್ಯವಿಲ್ಲ ಎನ್ನುತ್ತಾರೆ. ತಮಿಳುನಾಡಿಗೆ ನೀರು ಬಿಡುಗಡೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
ಕಾಲುವೆಯ ಕೊನೆಭಾಗಕ್ಕೆ ತಲುಪುವಂತೆ ಸಾಕಷ್ಟು ನೀರು ಕೊಡಬೇಕೆಂದು ಅವರು ಒತ್ತಾಯಿಸಿದರು. ನೀರು ಸ್ಟಾಕ್ ಮಾಡಿ ಇಟ್ಟುಕೊಳ್ಳಿ ಎಂದು ಕೋರಿದರು. ಸ್ಟಾಲಿನ್ ಜೊತೆ ಒಳ ಒಪ್ಪಂದ ಮಾಡಿಕೊಂಡು ನಮ್ಮ ರೈತರಿಗೆ ದ್ರೋಹ ಬಗೆಯದಿರಿ ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿಕೊಂಡು ನೀರಾವರಿ ಇಲಾಖೆಯನ್ನು ಮರೆಯಬಾರದು ಎಂದೂ ಆಗ್ರಹಿಸಿದರು.
ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ರಾಜ್ಯದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ ನಾರಾಯಣಗೌಡ ಅವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ