ಬೆಂಗಳೂರು:
ದೇವೇಗೌಡರ ಕುಟುಂಬವನ್ನು ಯಾರು ಸಹ ಖರೀದಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಯಾರಿಗೂ ಹೆದರುವುದಿಲ್ಲ, ದೆಹಲಿಯಲ್ಲಿ ಬಿಜೆಪಿ ನಾಯಕರನ್ನೂ ಖರೀದಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ವಿರುದ್ಧ 30 ಶಾಸಕರು ಬಂಡಾವೆದ್ದಿದ್ದು, ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಈ ಅಂಶವನ್ನು ಮರೆಮಾಚಲು ಡಿಕೆ ಶಿವಕುಮರ್ ಅವರು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿಯೇ ಪಕ್ಷ ಬೇರೆ ಪಕ್ಷಗಳ ನಾಯಕರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆಂದು ತಿಳಿಸಿದರು.
ಇದೇ ವೇಳೆ ತಮ್ಮ ಪಕ್ಷದ ಕಾರ್ಯಕರ್ತರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ಗೆ ಮಣಿಯುವುದಿಲ್ಲ. ನಮ್ಮ ಯಾವೊಬ್ಬ ನಾಯಕರೂ, ಕಾರ್ಯಕರ್ತರೂ ಪಕ್ಷ ಬಿಡುವುದಿಲ್ಲ ಎಂದರು.
ನೈಸ್ ರಸ್ತೆಯ ಅಕ್ರಮಗಳ ಕುರಿತು ದಾಖಲೆಗಳನ್ನು ಬಿಡುಗಡೆ ವಿಚಾರ ಕುರಿತು ಮಾತನಾಡಿ, ನೈಸ್ ರಸ್ತೆ ಹಗರಣದ ದಾಖಲೆ ಬಿಡುಗಡೆಗೆ ಸಮಸ್ಯೆ ಇದೆ. ನಾಳೆ ಚಂದ್ರಯಾನ ಇದೆ. ಜನರ ಗಮನ ಚಂದ್ರನ ಕಡೆ ಇರುತ್ತದೆ. ಹೀಗಾಗಿ ನಾನು ದಾಖಲೆ ಬಿಡುಗಡೆ ಮಾಡಿದರೆ ಅದು ಜನರಿಗೆ ತಲುಪುದಿಲ್ಲ ಎಂದು ಹೇಳಿದರು.
ದಾಖಲೆ ಬಿಡುಗಡೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಚಂದ್ರಯಾನ 3 ಕುರಿತು ನನಗೂ ಕುತೂಹಲವಿದೆ. ಹಾಗಾಗಿ ದಾಖಲೆಗಳ ಬಿಡುಗಡೆಯನ್ನು ಮುಂದೂಡಿದ್ದೇನೆ. ಈ ದಾಖಲೆಗಳನ್ನು ಶೀಘ್ರದಲ್ಲೇ ಮಾಡುತ್ತೇನೆ ಎಂದು ತಿಳಿಸಿದರು.ಬಳಿಕ ಕಾವೇರಿ ವಿಚಾರವಾಗಿ ಬುಧವಾರ ಸರ್ಕಾರ ಕರೆದಿರುವ ಸರ್ವಪಕ್ಷ ಸಭೆಗೆ ಹಾಜರಾಗುವುದಾಗಿ ತಿಳಿಸಿದರು.