ಬೆಂಗಳೂರು:
ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ಇಲ್ಲಿ ಹೇಳಿದರು.
ಜಲಸಂಪನ್ಮೂಲ ಸಚಿವರೂ ಆಗಿರುವ ಅವರು, ‘ಮೇಕೆದಾಟು ಯೋಜನೆಯು ಇಂತಹ ಸಂಕಷ್ಟದ ಸಮಯದಲ್ಲಿ ನಮಗೆ ಸಹಾಯ ಮಾಡುತ್ತದೆ ಮತ್ತು ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಬಗ್ಗೆ ನಾವು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದೇವೆ’ ಎಂದರು.
ಕರ್ನಾಟಕವು ತಮಿಳುನಾಡಿಗೆ ನೀರು ಬಿಡುವುದನ್ನು ಮೇಲ್ವಿಚಾರಣೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ನ್ಯಾಯಾಲಯವೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚಿಸಿದೆ ಮತ್ತು ತಾಂತ್ರಿಕ ಸಮಿತಿಯೂ ಇದೆ. ಈ ಬಾರಿ ಅವರು ತಾಂತ್ರಿಕ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಹೇಳಿದರು.
ಸುಮಾರು 400 ಟಿಎಂಸಿ ಅಡಿ ಕಾವೇರಿ ನೀರು ಸಮುದ್ರ ಸೇರಲಿದೆ. ಮೇಕೆದಾಟು ಅಣೆಕಟ್ಟಿನ ಮೂಲಕ ಈ ನೀರಿನ ಸ್ವಲ್ಪ ಭಾಗವನ್ನು ಉಳಿಸಿಕೊಂಡಿದ್ದರೂ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಮೇಕೆದಾಟು ಅಣೆಕಟ್ಟಿನ ನೀರನ್ನು ನಾವು ನೀರಾವರಿಗೆ ಬಳಸಲಾಗುವುದಿಲ್ಲ. ಏಕೆಂದರೆ, ಅದನ್ನು ಕುಡಿಯುವ ನೀರಿಗೆ ಮಾತ್ರ ಬಳಸಿಕೊಳ್ಳಬಹುದು. ನಾವು ನಮ್ಮ ಅರ್ಜಿಯಲ್ಲಿ ಈ ಸಮಸ್ಯೆ ಕುರಿತು ಉಲ್ಲೇಖಿಸಿದ್ದೇವೆ. ಈ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಿಸಬೇಕು ಎಂದು ಅವರು ಹೇಳಿದರು.
ನಮ್ಮ ರಾಜ್ಯದಲ್ಲಿ ನೀರು ಹರಿಸಲು ವಿರೋಧವಿದ್ದರೂ ಕೂಡ ನಾವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ನಮ್ಮ ಸರ್ಕಾರವು ನ್ಯಾಯಾಲಯಕ್ಕೆ ಎಲ್ಲಾ ಮಾಹಿತಿಯನ್ನು ನೀಡಿದ್ದು, ನಮ್ಮ ರಾಜ್ಯದ ರೈತರ ಹಿತ ಕಾಪಾಡಲು ನಾವು ಬದ್ಧರಾಗಿದ್ದೇವೆ. ನಮ್ಮಂತೆ, ತಮಿಳುನಾಡು ಸರ್ಕಾರ ಕೂಡ ತನ್ನ ರೈತರನ್ನು ಬಿತ್ತನೆ ಮಾಡದಂತೆ ಎಚ್ಚರಿಸಬೇಕಿತ್ತು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ