ತುಮಕೂರು:
ನಗರದ ಅಂತರಸನಹಳ್ಳಿ ಗ್ರಾಮದ ಸರಕಾರಿ ಶಾಲೆಗೆಂದು ಮೀಸಲಿರಿಸ್ದಿದ್ದ ಜಾಗವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿದ್ದು,ಸದರಿ ಖಾತೆಯನ್ನು ರದ್ದುಗೊಳಿಸಿ,ಲೋಕಾಯುಕ್ತ ನ್ಯಾಯಾಲಯದ ತೀರ್ಪಿನಂತೆ ಶಾಲೆಯ ಹೆಸರಿಗೆ ಖಾತೆ ಮಾಡಿಕೊಡುವಂತೆ ಆಗ್ರಹಿಸಿ ಇಂದು ಆಂತರಸನಹಳ್ಳಿ ಗ್ರಾಮಸ್ಥರು,ಶಾಲೆಯ ವಿದ್ಯಾರ್ಥಿಗಳು ಪೋಷಕರು ನಗರಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಅಂತರಸನಹಳ್ಳಿಯ ಗ್ರಾಮದ ಲಕ್ಷ್ಮಿ ನರಸಿಂಹ ಬಡಾವಣೆಯಲ್ಲಿ ಪಿಐಡಿ ನಂ 61291,80*45 ಮತ್ತು ಪಿಐಡಿ ನಂ 70962ರಲ್ಲಿ 45*125 ಎರಡು ಸ್ವತ್ತುಗಳು ಮಿರ್ಜಾ ಇಸ್ಮಾಯಿಲ್ ಎಂಬುವವರಿಗೆ ಪರಭಾರೆಯಾಗಿರುತ್ತದೆ.ಆದರೆ ಸದರಿ ವ್ಯಕ್ತಿ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಶಾಲೆ ಮತ್ತು ದೇವಾಲಯಕ್ಕೆಂದು ಮೀಸಲಿರಿಸಿದ್ದ ಸುಮಾರು 1.09 ಗುಂಟೆ ಜಾಗವನ್ನು ಅಕ್ರಮವಾಗಿ ತಮಗೆ ಸೇರಿದ್ದು ಎಂದು ಕಾಂಪೌಂಡ್ ಗೋಡೆ ನಿರ್ಮಿಸಿಕೊಂಡಿದ್ದು,ಈ ಬಗ್ಗೆ 2005 ರಿಂದ 2013ರವರೆಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಕೇಸು ನಡೆದು,04-06-2013 ರಂದು ನ್ಯಾಯಾಲಯ ಸದರಿ ವ್ಯಕ್ತಿಗೂ, ಗ್ರಾಮಠಾಣಾ ಜಾಗಕ್ಕೂ ಸಂಬಂಧಿವಿಲ್ಲ.ಹಾಗಾಗಿ ಖಾತೆ ರದ್ದುಗೊಳಿಸುವಂತೆ ಆದೇಶ ನೀಡಿದ್ದು, ಈ ಆದೇಶದಂತೆ 2019ರ ಸೆಪ್ಟಂಬರ್ 11 ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಯೂ ಸದರಿ ಖಾತೆ ವಜಾ ಮಾಡಿ, ಶಾಲೆ ಮತ್ತು ದೇವಾಲಯದ ಹೆಸರಿಗೆ ಖಾತೆ ಮಾಡುವಂತೆ ಒಮ್ಮತದ ತೀರ್ಮಾನವಾಗಿದ್ದರೂ ಇದುವರೆಗೂ ಖಾತೆ ಮಾಡಿಲ್ಲ ಎಂದು ದೂರಿದರು.
ಅಂತರಸನಹಳ್ಳಿ ಸರಕಾರಿ ಹೆಚ್.ಪಿ.ಎಸ್.ಶಾಲೆಯಲ್ಲಿ ಸುಮಾರು 260ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದು,ಜಾಗದ ಕೊರತೆಯಿಂದ ಮಕ್ಕಳು ಕಾರಿಡಾರ್‍ನಲ್ಲಿ ಕುಳಿತ ಪಾಠ, ಪ್ರವಚನ ಕೇಳಬೇಕಾದ ಸ್ಥಿತಿ ಇದೆ.ಶಾಲೆಗೆ ಅಗತ್ಯವಾದ ಕೊಠಡಿ ನಿರ್ಮಾಣ ಮಾಡಲು ಮುಂದಾದಾಗ, ಜಾಗದ ಬಗ್ಗೆ ತಕರಾರು ಎತ್ತುತಿದ್ದು,ಮಿರ್ಜಾ ಇಸ್ಮಾಯಿಲ್ ಅವರ ಜಾಗದ ಚೆಕ್‍ಬಂದಿಗೂ,ಶಾಲೆ ಮತ್ತು ದೇವಾಲಯಕ್ಕೆಂದು ಮೀಸಲಿರಿಸಿದ ಜಾಗದ ಚೆಕ್‍ಬಂದಿಗೂ ತಾಳೆಯಾಗುತ್ತಿಲ್ಲ.ಅಲ್ಲದೆ ಖಾಸಗಿ ಲೇಔಟ್‍ನ ಜಾಗವನ್ನು ಗ್ರಾಮಠಾಣಾ ಜಾಗದಲ್ಲಿ ಕ್ಲೈಮ್ ಮಾಡಲು ಮುಂದಾಗಿರುವುದು ಅಕ್ರಮವಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಸದರಿ ವಿಚಾರವಾಗಿ ಈ ಹಿಂದೆ ಪಾಲಿಕೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಭೂ ಬಾಲನ್ ಅವರು ಕಂದಾಯ ಇಲಾಖೆ ಮತ್ತು ಪಾಲಿಕೆಯ ಜಂಟಿ ಸರ್ವೆ ನಡೆಸಿ,ಸದರಿ ಜಾಗದಲ್ಲಿ ಮಿರ್ಜಾ ಇಸ್ಮಾಯಿಲ್ ಅವರು ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು 2020ರ ಜೂನ್ 16 ರಂದು ಪಾಲಿಕೆಯ ವಾಹನಗಳನ್ನು ಬಳಸಿ ನೆಲಸಮ ಮಾಡಿ,ಸದರಿ ಖಾತೆಯನ್ನು ಬ್ಲಾಕ್‍ಲೀಸ್ಟ್‍ಗೆ ಹಾಕಿದ್ದರು.ಆದರೆ ಇಂದಿಗೂ ಸಹ ಮ್ಯಾನುಯಲ್ ಖಾತೆ ಬ್ಲಾಕ್‍ಲೀಸ್ಟ್‍ನಲ್ಲಿದ್ದರೆ, ಆನ್‍ಲೈನ್‍ನಲ್ಲಿ ಖಾತೆ ಓಪನ್ನಾಗಿದೆ. ಹಾಗಾಗಿ ಸದರಿ ಖಾತೆಯನ್ನು ರದ್ದು ಮಾಡಿ, ಶಾಲೆಗೆ ಅಗತ್ಯವಿರುವ 65*76 ಜಾಗವನ್ನು ಶಾಲೆಯ ಹೆಸರಿಗೆ ಖಾತೆ ಮಾಡಿಕೊಡುವಂತೆ ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದರು.
ಲೋಕಾಯುಕ್ತ ನ್ಯಾಯಾಲಯ ಮತ್ತು ನಗರಪಾಲಿಕೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಜಂಟಿ ಸರ್ವೆ ನಡೆಸಿ,ಮಿರ್ಜಾ ಇಸ್ಮಾಯಿಲ್ ಅವರು ಪಿಐಡಿ ನಂಬರ್ ಮತ್ತು ಖಾತೆಗಳಿಗೂ,ಶಾಲೆ ಮತ್ತು ದೇವಾಲಯಕ್ಕೆಂದು ಮೀಸಲಿರಿಸಿದ್ದ ಜಾಗಕ್ಕೂ ತಾಳೆಯಾಗುತ್ತಿಲ್ಲ ಎಂಬ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರ ವರದಿ ನಂತರ, ಖಾತೆ ರದ್ದು ಮಾಡುವ ಆದೇಶವಿದ್ದರೂ ಇದುವರೆಗೂ ಅಕ್ರಮವಾಗಿ ಖಾತೆಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ.
ಸರಕಾರದಿಂದ ಶಾಲೆ ನಿರ್ಮಾಣಕ್ಕೆ ಹಣ ಮಂಜೂರಾದರೂ ಭೂ ವ್ಯಾಜ್ಯದಿಂದ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿಲ್ಲ.ಈ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರು ಜಿಲ್ಲಾಡಳಿತ,ಪಾಲಿಕೆ, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡಸುವುದಾಗಿ ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
ತುಮಕೂರು ಮೇಯರ್ ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುವ ವೇಳೆ ಅಂತರಸರನಹಳ್ಳಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳ ಪೋಷಕರಾದ ಪ್ರಸನ್ನಕುಮಾರ್.ಟಿ.ಜಿ.,ಸಿದ್ದೇಶ್‍ಪ್ರಸಾದ್ ,ಗಿರೀಶ್,ಮಂಜುನಾಥ್.ಪಿ,ಮಂಜೀಶ್,ವಿನಯ್‍ಕುಮಾರ್, ಹನುಮಂತರಾಜು, ಶಿವಕುಮಾರ್, ಯಲ್ಲಪ್ಪ,ಲಿಂಗರಾಜು,ನಿವೃತ್ತ ಯೋಧರಾದ ದೊಡ್ಡರಾಮಯ್ಯ,ರಾಜಣ್ಣ,ಶಿವರಾಜು, ಲಿಂಗರಾಜು, ವೆಂಕಟೇಶಾಚಾರ್ ಸೇರಿದಂತೆ ಹಲವು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ