ಬೆಂಗಳೂರು:
ಕರ್ನಾಟಕದಲ್ಲಿ ಮನೆ ಮಾತಾಗಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಹೊಂದಿದೆ. ಇಂದಿಗೂ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಅದರಲ್ಲೂ ಧಾರಾವಾಹಿಯಲ್ಲಿನ ಇತ್ತೀಚೆಗಿನ ಬೆಳವಣಿಗೆಯಂತೂ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.
ಕಂಠಿ ಮತ್ತು ಸ್ನೇಹಾ ಮದುವೆಯಾದ ಮೇಲೆ ಧಾರಾವಾಹಿ ಬೇರೆಯದ್ದೇ ಟನ್ ತೆಗೆದುಕೊಂಡಿದೆ. ಅಲ್ಲೋಲ ಕಲ್ಲೋಲವೇ ಆಗಿ ಹೋಗಿತ್ತು.
ಸ್ನೇಹಾಳ ಸಂಸಾರ ಸರಿ ಹೋಗಲಿ ಎಂಬುದೇ ಪುಟ್ಟಕ್ಕನ ಒತ್ತಾಸೆಯಾಗಿತ್ತು. ಇತ್ತೀಚೆಗೆ ಅದೇ ವಿಚಾರ ಅನಾರೋಗ್ಯಕ್ಕೂ ಕಾರಣವಾಗಿತ್ತು. ಈಗ ಪುಟ್ಟಕ್ಕನಿಗೂ ನೋವಾಗಬಾರದೆಂದು ಸ್ನೇಹಾ, ಬಂಗಾರಮ್ಮನಿಗೆ ಒಳ್ಳೆಯ ಸೊಸೆ ಆಗಲು ಹೊರಟಿದ್ದಾಳೆ. ಈ ಎಪಿಸೋಡ್ಗಳು ಬಹಳ ಇಂಟ್ರೆಸ್ಟಿಂಗ್ ಎನಿಸಿವೆ.
ಸದ್ಯಕ್ಕೆ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಮೆಸ್ಗೆ ಬೆಂಕಿ ಬಿದ್ದಿದೆ. ಪುಟ್ಟಕ್ಕನ ಜೀವನಕ್ಕೆ ಆಧಾರವಾಗಿದ್ದ ಮೆಸ್ ಇದು. ಈಗ ಬೆಂಕಿ ಹಚ್ಚಿದ್ದರ ಹಿಂದೊಂದು ಕುತಂತ್ರವೂ ಇದೆ. ಸ್ನೇಹಾ ಈಗ ಬಂಗಾರಮ್ಮ ಮನೆಯ ಸೊಸೆಯಾಗಿದ್ದಾಳೆ. ಮಾರ ಬಂಗಾರಮ್ಮನ ಮನೆಯಲ್ಲಿ ಕೆಲಸದಾಳಾಗಿದ್ದಾನೆ. ಅವನನ್ನು ಬಳಸಿಕೊಂಡು ಮೆಸ್ಗೆ ಬೆಂಕಿ ಹಚ್ಚಲಾಗಿದೆ. ಈ ಎಲ್ಲಾ ಕುತಂತ್ರದ ಹಿಂದೆ ಇರೋದು ಬಂಗಾರಮ್ಮ ಮೇಲೆಯೇ ಕೆಟ್ಟ ಅಭಿಪ್ರಾಯ ಬರಲಿ ಎಂಬುದಾಗಿದೆ.
ಈ ಧಾರಾವಾಹಿಯಲ್ಲಿ ಮೆಸ್ಗೆ ಬೆಂಕಿ ಬಿದ್ದಿರುವುದೇ ಹೈಲೈಟ್. ಬೆಂಕಿ ಬಿದ್ದ ದಿನ ಪುಟ್ಟಕ್ಕ ಕುಸಿದು ಬಿಟ್ಟರು. ಅಂದ ಚೆಂದವಾದ ಮೆಸ್ ಸುಟ್ಟು ಭಸ್ಮವಾಗಿದೆ. ಆದರೆ, ಬೆಂಕಿ ಬೀಳುವುದಕ್ಕೂ ಮುನ್ನ ಎಷ್ಟೆಲ್ಲಾ ತಯಾರಿ ನಡೆದಿದೆ ಗೊತ್ತಾ..? ಒಂದು ಸುಂದರವಾದ ಮೆಸ್ಗೆ ಬೆಂಕಿ ಹಚ್ಚೋದು ಅಂದರೆ ಸುಲಭನಾ..? ಈಗ ಮೇಕಿಂಗ್ ವಿಡಿಯೋ ಒಂದು ವೈರಲ್ ಆಗುತ್ತಾ ಇದೆ. ಅದರಲ್ಲಿ ಮೆಸ್ ಗೆ ಬೆಂಕಿ ಹಚ್ಚಿ, ಆ ಹೊಗೆಯಲ್ಲೂ ಕ್ಯಾಮರಾ ಇಟ್ಟು ಶೂಟ್ ಮಾಡಿದ್ದಾರೆ.
ಈಗಾಗಲೇ ಧಾರಾವಾಹಿಯಲ್ಲಿ ಬೆಂಕಿ ಬಿದ್ದಾಗ ಪುಟ್ಟಕ್ಕ ಮತ್ತು ಮಕ್ಕಳು ಎಷ್ಟು ಗೋಳಾಡಿದರು ಎಂಬುದನ್ನು ಎಲ್ಲರೂ ನೋಡಿ ಆಗಿದೆ. ಆದರೆ, ಅದರ ಹಿಂದಿನ ತಯಾರಿ, ಶ್ರಮ ಹೇಗಿತ್ತು ಅನ್ನೋದು ವಿಡಿಯೋದಲ್ಲಿ ಗೊತ್ತಾಗುತ್ತಿದೆ. ಧಾರಾವಾಹಿಯಲ್ಲಿ ಮೇಕಪ್ ಇರುವುದು ಕಾಮನ್. ನಮ್ಮ ಕಣ್ಣಿಗೆ ಕಂಡಿದ್ದು ಬೇರೆಯಾದರೆ ಅದರ ಹಿಂದೆ ನಡೆಯುವುದು ಬೇರೆಯದ್ದೇ ಆಗಿರುತ್ತದೆ. ಬೆಂಕಿಯ ಕೆನ್ನಾಲಿಯಲ್ಲಿ ನಿಂತಿದ್ದ ‘ಪುಟ್ಟಕ್ಕನ ಮಕ್ಕಳು’, ಅಳಿಯಂದಿರೆಲ್ಲ ಮೇಕಪ್ನಲ್ಲಿ ಬ್ಯುಸಿಯಾಗಿದ್ದಾರೆ. ಪುಟ್ಟಕ್ಕ ಮೆಸ್ ಹೋದ ಬೇಸರ ತೋಡಿಕೊಳ್ಳುವ ತಯಾರಿಯಲ್ಲಿರುವುದು ಕಂಡು ಬಂದಿದೆ.
ಬಂಗಾರಮ್ಮ ಮತ್ತು ಪುಟ್ಟಕ್ಕನ ಸ್ನೇಹ ಒಡೆಯುವ ಕೆಲಸ ಮಾಡಲು ಹಲವರು ಈ ರೀತಿ ಮೆಸ್ಗೆ ಬೆಂಕಿ ಹಚ್ಚಿದ್ದಾರೆ. ಇದನ್ನು ಕಂಠಿ ಕಂಡು ಹಿಡಿಯುವ ಪ್ರಯತ್ನಕ್ಕೆ ಕೈ ಹಾಕಿದ್ದಾನೆ. ಪೊಲೀಸಪ್ಪನನ್ನು ಕೂಡಿ ಹಾಕಿ, ಬೆವರಿಳಿಸುತ್ತಿದ್ದಾನೆ. ಕಾಳಿಯ ಕರೆ ಹಿಂದೆ ಬಿದ್ದಿದ್ದು, ರಾಜೇಶ್ವರಿಯ ಕೈವಾಡ ಇರುವುದು ಇಷ್ಟರಲ್ಲಿಯೇ ತಿಳಿಯಲಿದೆ. ಒಟ್ಟಾರೆ, ಬಂಗಾರಮ್ಮನದ್ದು ಏನು ತಪ್ಪಿಲ್ಲ ಎಂದು ಸಾಬೀತು ಪಡಿಸುವಲ್ಲಿ ಕಂಠಿ ಯಶಸ್ಸು ಕಾಣುತ್ತಾನೆ. ಅಷ್ಟೇ ಯಾಕೆ ಈಗ ಸ್ನೇಹಾ ಮತ್ತು ಕಂಠಿ ಒಂದಾದಂತೆ ಬಂಗಾರಮ್ಮ ಮತ್ತು ಸ್ನೇಹಾ ಕೂಡ ಒಂದಾಗುವ ಕಾಲ ಬರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ