ವಾಸ್ತವಿಕ ಸ್ಥಿತಿ ಅರಿಯಲು ತಜ್ಞರ ಸಮಿತಿ ಕಳುಹಿಸಿ : ಎಂಬಿಪಿ ಮನವಿ

ಬೆಂಗಳೂರು:

    ರಾಜ್ಯದ ಜಲಾಶಯಗಳ ವಾಸ್ತವಿಕ ಸ್ಥಿತಿ ಅರಿಯಲು ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಿ, ಅಲ್ಲಿಯವರೆಗೆ ನೀರು ಬಿಡುಗಡೆ ಮಾಡುವ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯಿರಿ ಎಂದು ಕೇಂದ್ರ ಸರ್ಕಾರಕ್ಕೆ ಸಚಿವ ಎಂ.ಬಿ.ಪಾಟೀಲ್ ಅವರು ಮನವಿ ಮಾಡಿಕೊಂಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಂಕಷ್ಟದ ವರ್ಷ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕು. ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಲು ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಬೇಕು. ತಜ್ಞರ ತಂಡ ನೀಡಿದ ವರದಿಯನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

    ನಮಗೆ ಕುಡಿಯಲು ನೀರಿಲ್ಲ. ಬೆಂಗಳೂರಿಗೆ ಜೂನ್, ಜುಲೈ, ಆಗಸ್ಟ್ ವರೆಗೆ ಕುಡಿಯುವ ನೀರು ಬೇಕು. ಇದು ಅತ್ಯಂತ ಗಂಭೀರವಾದ ಪರಿಸ್ಥಿತಿ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಭಾಗವಂತ್ ಖೂಬಾ, ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.

   ಇದೇ ವೇಳೆ ಮೂರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಸಿಎಂ ಹುದ್ದೆಗಳನ್ನು ಹೈಕಮಾಂಡ್ ಅವರೇ ಸೃಷ್ಟಿ ಮಾಡಬೇಕು. ನಮ್ಮ ಹಂತದಲ್ಲಿ ಯಾವುದೂ ಇಲ್ಲ. ಹೈಕಮಾಂಡ್ 3-4 ಡಿಸಿಎಂ ಹುದ್ದೆ ಸೃಷ್ಟಿ ಮಾಡಬಹುದು. ಈ ವಿಚಾರವನ್ನು ಪಕ್ಷದ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡುತ್ತೇವೆಂದು ಹೇಳಿದರು.

    ಡಿಸಿಎಂ ವಿಚಾರವಾಗಿ ಹೈಕಮಾಂಡ್ ಏನೇ ಹೇಳಿದರೂ ಒಪ್ಪಲೇಬೇಕು. ದಲಿತ ಸಿಎಂ, ಡಿಸಿಎಂ ಬಗ್ಗೆ ಮಾತನಾಡಿದರೆ ತಪ್ಪೇನಿದೆ?. ಅವರ ಅಭಿಪ್ರಾಯದ ಬಗ್ಗೆ ಪತ್ರ ಬರೆಯುತ್ತಾರೆ. ಅನೇಕ ಸಮುದಾಯಗಳಿಗೆ ಸ್ಥಾನಮಾನ ಸಿಕ್ಕಿಲ್ಲ. ಲಂಬಾಣಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡೋಕೆ ಆಗಲಿಲ್ಲ. ಬಹಳ ಜನ ಇದ್ದಾರೆ. ರಾಯರೆಡ್ಡಿ, ಆರ್.ವಿ.ದೇಶಪಾಂಡೆ ಸೇರಿದಂತೆ ಬಹಳಷ್ಟು ಸಮರ್ಥರಿದ್ದಾರೆ. ಜವಾಬ್ದಾರಿಯುತ ಸಚಿವರು ಪತ್ರ ಬರೆಯುತ್ತಾರೆ. ಎಲ್ಲಾ ಸಮುದಾಯಗಳೂ ನಮ್ಮ ಜೊತೆಯಲ್ಲಿ ನಿಂತಿವೆ. 135 ಸ್ಥಾನದ ಬಹುಮತ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿನ ವಿಚಾರಗಳು ​​ಬೇರೆ ಬೇರೆ ಇರುತ್ತದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಇಪ್ಪತ್ತು ಸ್ಥಾನ ಗೆಲ್ಲುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link