ಬೆಂಗಳೂರು:
ಈ ವರ್ಷ ಮುಂಗಾರು ಮಳೆ ಕೊರತೆಯಿಂದ ತೀವ್ರ ಬರಗಾಲ ಉಂಟಾಗಿರುವಾಗ ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ಮಾಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಹಿರಿಯ ಚಳವಳಿಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಡಿದ್ದು ಅಂದರೆ ಸೆಪ್ಟೆಂಬರ್ 29ರಂದು ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ನಿನ್ನೆ ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ ನಡೆಸಿ ತಮಿಳುನಾಡಿಗೆ ಮತ್ತೆ 18 ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ CWRC ಆದೇಶ ನೀಡಿದೆ. ನಾಳೆ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚಿಸಿದೆ. ಇದರಿಂದ ರೈತರು ಮತ್ತಷ್ಟು ಆಕ್ರೋಶಗೊಂಡಿದ್ದು ಪ್ರತಿಭಟನೆ ಮುಂದುವರೆಸಿದ್ದಾರೆ.
ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ ನಡೆಸಲು ಮುಂದಾಗಿದೆ. ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಹೆಚ್ ಡಿ ಕುಮಾರಸ್ವಾಮಿ, ಸದಾನಂದಗೌಡ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಮಂಡ್ಯ, ರಾಮನಗರ, ಮೈಸೂರು ಸೇರಿದಂತೆ ಅನೇಕ ಕಡೆ ಪ್ರತಿಭಟನೆ ಮುಂದುವರೆಯಲಿದೆ.
ಕನ್ನಡಪರ ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕಲು ತಯಾರಿ ನಡೆದಿದೆ. ನಿನ್ನೆ ಧರಣಿನಿರತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೋರಾಟವನ್ನು ಹತ್ತಿಕ್ಕುವ ಪೊಲೀಸ್ ನಡೆ ಖಂಡಿಸಿ ಇಂದು ಪ್ರತಿಭಟನೆ ನಡೆಯಲಿದೆ.
ಇನ್ನು ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ ರೈತ ಸಂಘಟನೆಯವರು ಬೆಂಗಳೂರು ಬಂದ್ ನಿರ್ಧಾರವನ್ನು ಆತುರದಿಂದ ತೆಗೆದುಕೊಂಡಿದ್ದರಿಂದ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ನಾವು ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕ್ತೀವಿ. ನಮ್ಮ ಕಾವೇರಿ ಹೋರಾಟ ಮುಂದುವರಿಯುತ್ತೆ, ಕರ್ನಾಟಕ ಬಂದ್ ನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಸೆಪ್ಟೆಂಬರ್ 29ರಂದು ನಡೆಯುವ ಕರ್ನಾಟಕ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಲಿದೆ. ಕನ್ನಡ ಪರ ಹೋರಾಟಗಾರು ಕಾವೇರಿಗಾಗಿ ಸದಾ ಸಿದ್ಧರಾಗುತ್ತಾರೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
