ಕೋಲ್ಕತ್ತಾ:
ಕೋಲ್ಕತ್ತಾದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಅವರಿಗೆ ಅಕ್ಟೋಬರ್ 3 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಗುರುವಾರ ಸಮನ್ಸ್ ಜಾರಿ ಮಾಡಿದೆ.
ರಾಜ್ಯದ ಬರಬೇಕಾದ ಅನುದಾನವನ್ನು ತಡೆಹಿಡಿಯುವ ಕೇಂದ್ರದ ನಿರ್ಧಾರದ ವಿರುದ್ಧ ದೆಹಲಿಯಲ್ಲಿ ಟಿಎಂಸಿ ಪ್ರತಿಭಟನಾ ರ್ಯಾಲಿ ಆಯೋಜಿಸಿದ ದಿನವೇ ತಮಗೆ ವಿಚಾರಣೆಗೆ ಕರೆಯಲಾಗಿದೆ ಎಂದು ಅಭಿಷೇಕ್ ಬ್ಯಾನರ್ಜಿ ಅವರು ಹೇಳಿದ್ದಾರೆ.
ಇಡಿ ತಮಗೆ ನೀಡಿರುವ ಸಮನ್ಸ್ ಪ್ರತಿಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ ಸಂಸದ, “ಈ ತಿಂಗಳ ಆರಂಭದಲೂ ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಪ್ರಮುಖ ಸಮನ್ವಯ ಸಭೆ ಇದ್ದ ದಿನದಂದೇ ಇಡಿ ನನ್ನನ್ನು ವಿಚಾರಣೆಗೆ ಕರೆದಿತ್ತು. ನಾನು ವಿಚಾರಣೆಗೆ ಹಾಜರಾಗಿದ್ದೇನೆ ಮತ್ತು ಅವರು ನೀಡಿದ್ದ ಸಮನ್ಸ್‌ಗಳನ್ನು ಪಾಲಿಸಿದ್ದೇನೆ” ಎಂದು ತಿಳಿಸಿದ್ದಾರೆ.
“ಈಗ, ಇಂದು ಮತ್ತೊಮ್ಮೆ, ಅವರು ಅಕ್ಟೋಬರ್ 3 ರಂದು ದೆಹಲಿಯಲ್ಲಿ ಪಶ್ಚಿಮ ಬಂಗಾಳತ್ತೆ ಬರಬೇಕಾದ ನ್ಯಾಯಸಮ್ಮತವಾದ ಬಾಕಿಗಾಗಿ ಪ್ರತಿಭಟನಾ ಆಂದೋಲನ ನಿಗದಿಪಡಿಸಿದ ದಿನದಂದು ವಿಚಾರಣೆಗೆ ಹಾಜರಾಗುವಂತೆ ನನಗೆ ಮತ್ತೊಂದು ಸಮನ್ಸ್ ನೀಡಿದ್ದಾರೆ. ಇದು ಅವರು ನಿಜವಾಗಿಯೂ ವಿಚಲಿತರಾಗಿದ್ದಾರೆ ಮತ್ತು ಅವರಿಗೆ ಭಯ ಶುರುವಾಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ!” ಎಂದು ಟಿಎಂಸಿ ನಾಯಕ ಟ್ವೀಟ್ ಮಾಡಿದ್ದಾರೆ.