ಚಿಕ್ಕಬಳ್ಳಾಪುರ:
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಶುಕ್ರವಾರ ರಾಜ್ಯದ್ಯಂತ ಕರೆ ನೀಡಿರುವ `ಕರ್ನಾಟಕ ಬಂದ್’ಗೆ ಚಿಕ್ಕಬಳ್ಳಾಪುರದಲ್ಲಿ ವ್ಯಾಪಕ ಜನ ಬೆಂಬಲ ದೊರೆಯಲಿಲ್ಲ.
ಜಿಲ್ಲಾ ಕಸಾಪ, ಶಾಶ್ವತ ನೀರಾವರಿ ಹೋರಾಟಗಾರರು ಹಾಗೂ ಕೆಲ ಕರವೇ ಸಂಘಟನೆಗಳ ಮುಖಂಡರು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದು ಹೊರತು ಪಡಿಸಿದರೆ, ದೊಡ್ಡ ಮಟ್ಟದಲ್ಲಿ ಬಂದ್‍ಗೆ ಯಾವುದೇ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಲಿಲ್ಲ.
ಬೆಳಿಗ್ಗೆ 10 ಗಂಟೆಗೆ ನಗರದ ಜೂನಿಯರ್ ಕಾಲೇಜು ಬಳಿ ಜಮಾವಣೆಗೊಂಡ ವಿವಿಧ ಸಂಘಟನೆಗಳ ಮುಖಂಡರು, ಅಲ್ಲಿಂದ ಕಾಲ್ನಡಿಗೆ ಮೂಲಕ ಎಸಿ ಕಚೇರಿ ಬಳಿಗೆ ತೆರಳಿ, ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಕನ್ನಡ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೈಯಲ್ಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು.
ಎಂದಿನಂತೆ ನಡೆದ ಶಾಲಾಕಾಲೇಜು: ಕೆಲ ಖಾಸಗಿ ಶಾಲಾ ಕಾಲೇಜುಗಳು ಕರ್ನಾಟಕ ಬಂದ್ ಬೆಂಬಲಿಸಿ ರಜೆ ಘೋಷಿಸಿದರೆ, ಉಳಿದಂತೆ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರಲಿಲ್ಲ. ಶಾಂತಿಯುತ ವಾತಾವರಣ ಇದ್ದ ಕಾರಣ ಬೆಳಿಗ್ಗೆ 10 ಗಂಟೆಯ ನಂತರ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದವು.
ಇನ್ನೂ ಖಾಸಗಿ ಬಸ್‍ಗಳು ರಸ್ತೆಗೆ ಇಳಿಯಲಿಲ್ಲ. ಆಟೋ, ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಎಂದಿನಂತೆ ಸಂಚಾರ ಇದ್ದರೂ ಪ್ರಯಾಣಿಕರ ಕೊರತೆ ಎದುರಾಗಿತ್ತು. ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿತ್ತು. ಈ ವೇಳೆ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಯಿತು.
ಪಂಜಿನ ಮೆರವಣಿಗೆ :
ಕರ್ನಾಟಕ ಬಂದ್‍ಗೆ ಬೆಂಬಲಿಸಿ ಶಿಡ್ಲಘಟ್ಟ ನಗರದಲ್ಲಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು. ಕಾವೇರಿ ನಮ್ಮದು, ನಮ್ಮ ನೀರು ನಮಗೆ ಬಿಡಿ ಎಂದು ಘೋಷಣೆ ಕೂಗುವ ಮೂಲಕ ನಗರದ ತಾಲ್ಲೂಕು ಕಚೇರಿ, ಬಸ್ ನಿಲ್ದಾಣ, ರಸ್ತೆ, ರೈಲ್ವೇ ಸ್ಟೇಷನ್ ರಸ್ತೆಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಪಂಜಿನ ಮೆರವಣಿಗೆ ನಡೆಯಿತು. ಉಳಿದ ತಾಲ್ಲೂಕುಗಳಲ್ಲಿ ಶಾಂತಿಯುತ ಬಂದ್ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ