ಬೆಂಗಳೂರು:
ಮಳೆ ಕೊರತೆ, ರೋಗ ಮೊದಲಾದ ಕಾರಣಗಳಿಂದ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಈರುಳ್ಳಿ ಇಳುವರಿ ಕಡಿಮೆಯಾಗಿದೆ ಈರುಳ್ಳಿ ಬೆಲೆ ಏರಿಕೆ ಹಾದಿಯಲ್ಲಿದ್ದು, ಗ್ರಾಹಕರಿಗೆ ಮತ್ತೆ ಕಣ್ಣೀರು ತರಿಸತೊಡಗಿದೆ.ಇದರಿಂದಾಗಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ.
40 ರೂ. ಆಸು ಪಾಸಿನಲ್ಲಿ ಮಾರಾಟವಾಗುತ್ತಿರುವ ಈರುಳ್ಳಿ ದರ ದಸರಾ, ದೀಪಾವಳಿ ಹಬ್ಬದ ವೇಳೆಗೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ದಾವಣಗೆರೆ ಈರುಳ್ಳಿ ಮಾರುಕಟ್ಟೆಗೆ ಪ್ರತಿದಿನ ಸುಮಾರು 500 ಟನ್ ಈರುಳ್ಳಿ ಮಹಾರಾಷ್ಟ್ರದ ಅಹಮದ್ ನಗರ, ನಾಸಿಕ್, ಪುಣೆ, ಕರ್ನಾಟಕದ ಚಳ್ಳಕೆರೆ, ರಾಣೆಬೆನ್ನೂರು, ಹರಪನಹಳ್ಳಿ, ಜಗಳೂರು ಮೊದಲಾದ ಕಡೆಗಳಿಂದ ಬರುತ್ತದೆ.
15 ದಿನಗಳ ಹಿಂದೆ 100 ರೂಪಾಯಿಗೆ 5 ಕೆಜಿ ಇದ್ದ ಈರುಳ್ಳಿ ದರ ಬೇಡಿಕೆ ಹೆಚ್ಚಾಗಿರುವುದರಿಂದ ಈಗ ಕೆಜಿಗೆ 40 ರೂ.ಗೆ ಮಾರಾಟವಾಗುತ್ತಿದೆ. ಸಾಮಾನ್ಯ ದರ್ಜೆಯ ಈರುಳ್ಳಿ ಕೆಜಿಗೆ 30 ರೂ., ಸಣ್ಣ ಈರುಳ್ಳಿ ಕೆಜಿಗೆ 25 ರೂ. ಗೆ ಮಾರಾಟವಾಗುತ್ತಿದ್ದು, ಹಬ್ಬದ ಹೊತ್ತಿಗೆ ಈರುಳ್ಳಿ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ರೈತರಿಂದ ಕೆಜಿಗೆ 15 ರಿಂದ 20 ರೂಪಾಯಿಗೆ ಈರುಳ್ಳಿ ಖರೀದಿಸುವ ಮಧ್ಯವರ್ತಿಗಳು, ವ್ಯಾಪಾರಸ್ಥರಿಗೆ ಕೆಜಿಗೆ 25 ರಿಂದ 30 ರೂ. ಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರಿಗೆ 35 ರಿಂದ 40 ರೂ. ಗೆ ಮಾರಾಟವಾಗುತ್ತಿದ್ದು, ರೈತರಿಗೆ ಬೆಲೆ ಸಿಗದಂತಾಗಿದ್ದರೆ, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮಧ್ಯವರ್ತಿಗಳು, ವರ್ತಕರಿಗೆ ಅನುಕೂಲವಾಗುತ್ತಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ