ಹಾಸನ:
ರಾಜಧಾನಿ ಬೆಂಗಳೂರಿನಿಂದ ಸುಮಾರು 130 ಕಿಲೋ ಮೀಟರ್ ದೂರದಲ್ಲಿರುವ ಹಾಸನಾಂಬಾ ದೇವಸ್ಥಾನವನ್ನು ಇಂದು ಗುರುವಾರ ನವೆಂಬರ್ 2ರಂದು ತೆರೆಯಲಾಗಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆಯ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ. ಆದರೆ ಇಂದು ಹಾಸನಾಂಬಾ ದೇವಿಯ ದರ್ಶನ ಮಾಡಲು ಭಕ್ತರಿಗೆ ಅವಕಾಶವಿರುವುದಿಲ್ಲ, ನಾಳೆಯಿಂದ ದರ್ಶನ ಮಾಡಬಹುದಾಗಿದೆ. ಇಂದು ಹಾಸನಾಂಬೆಯ ಗರ್ಭಗುಡಿ ಸ್ವಚ್ಛತೆ, ಪೂಜೆ, ನೈವೇದ್ಯ ಪ್ರಕ್ರಿಯೆಗಳಷ್ಟೇ ನಡೆಯಲಿದೆ. ನಾಳೆ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಹಾಸನಾಂಬಾ ದೇವಿಯ ದರ್ಶನ ಪಡೆಯಲು ಅವಕಾಶವಿದೆ.
ಕಳೆದ ವರ್ಷ ಗರ್ಭಗುಡಿಯಲ್ಲಿ ಹುತ್ತದೋಪಾದಿಯಲ್ಲಿರುವ ಆದಿಶಕ್ತಿಸ್ವರೂಪಿಣಿ ಹಾಸನಾಂಬೆಗೆ ಹಚ್ಚಿಟ್ಟಿದ್ದ ದೀಪವು ಆರದೆ, ಮುಡಿಸಿದ ಹೂ ಬಾಡದೆ ಹಾಗೂ ನೈವೇದ್ಯಕ್ಕಿಟ್ಟ ಅಕ್ಕಿಯು ಅನ್ನವಾಗಿರುವ ವಿಸ್ಮಯ ದೃಶ್ಯವನ್ನು ಭಕ್ತಾದಿಗಳು ಕಣ್ತುಂಬಿಕೊಳ್ಳುವುದು ಇಲ್ಲಿನ ವಿಶೇಷತೆಯಾಗಿದೆ. ವರ್ಷಕ್ಕೊಮ್ಮೆ ಹಾಸನಾಂಬೆ ದೇಗುಲದ ಬಾಗಿಲು ತೆರೆದು ಭಕ್ತರಿಗೆ ದರ್ಶನ ಸಿಗುವುದು ಇಲ್ಲಿನ ವಿಶೇಷತೆಯಾಗಿದೆ.
ಇಂದಿನಿಂದ 14 ದಿನ ಹಾಸನದಲ್ಲಿ ಹಾಸನಾಂಬೆ ದೇಗುಲ ತೆರೆದಿರಲಿದ್ದು ಭಕ್ತಾದಿಗಳಿಗೆ ಅವಕಾಶವಿರುತ್ತದೆ. ಈ ಬಾರಿ ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲು ಹಾಸನ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.