ದತ್ತಾಂಶದ ಆಧಾರದ ಮೇಲೆ ಪರಿಹಾರ ವಿತರಣೆ : ಸಚಿವ

ಬೆಂಗಳೂರು:

     ಬರಗಾಲದಿಂದ ಆಗಿರುವ ಬೆಳೆ ಹಾನಿಗೆ ‘ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆ’ (ಫ್ರೂಟ್ಸ್‌) ದತ್ತಾಂಶದ ಆಧಾರದಲ್ಲೇ ಪರಿಹಾರ ವಿತರಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಹೇಳಿದರು.

     ನಿನ್ನೆಯಷ್ಟೇ ಸಚಿವರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಆಯ್ದ ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರ ಜೊತೆ ಸಭೆ ನಡೆಸಿದರು.

     ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಹಿಂದಿನ ವರ್ಷಗಳಲ್ಲಿ ಬರ ಪರಿಹಾರ ವಿತರಣೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವುದು ಪತ್ತೆಯಾಗಿತ್ತು. ಅಕ್ರಮಗಳನ್ನು ತಡೆಯುವುದಕ್ಕಾಗಿ ಫ್ರೂಟ್ಸ್‌ ದತ್ತಾಂಶದ ಆಧಾರದಲ್ಲಿ ಪರಿಹಾರ ವಿತರಣೆಗೆ ನಿರ್ಧರಿಸಲಾಗಿದೆ’ ಎಂದು ಹೇಳಿದರು.

     ರಾಜ್ಯದ ಶೇಕಡ 95ರಷ್ಟು ರೈತರು ಫ್ರೂಟ್ಸ್‌ ಗುರುತಿನ ಸಂಖ್ಯೆ ಹೊಂದಿದ್ದಾರೆ. ಆದರೆ, ಒಟ್ಟು ಸಾಗುವಳಿ ವಿಸ್ತೀರ್ಣದ ಶೇ 65ರಷ್ಟು ಮಾತ್ರ ದತ್ತಾಂಶದಲ್ಲಿ ದಾಖಲಾಗಿದೆ. ಆದ್ದರಿಂದ ವಿಸ್ತೀರ್ಣದ ವಿವರವನ್ನು ದಾಖಲಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು. ನಂತರದಲ್ಲಿ ಫ್ರೂಟ್ಸ್‌ ದತ್ತಾಂಶದಲ್ಲಿ ದಾಖಲಾದ ವಿಸ್ತೀರ್ಣದ ಆಧಾರದಲ್ಲೇ ಪರಿಹಾರ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

    ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಕಂದಾಯ ಇಲಾಖೆ ಕಚೇರಿಗಳಲ್ಲಿ ಫ್ರೂಟ್ಸ್‌ ದತ್ತಾಂಶದಲ್ಲಿ ವಿಸ್ತೀರ್ಣ ದಾಖಲಿಸಲು ಅವಕಾಶ ಕಲ್ಪಿಸಲಾಗುವುದು. ರೈತರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

    ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಟ್ಯಾಂಕರ್‌ ಒದಗಿಸಲು ಟೆಂಡರ್‌ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ. ಬೇಡಿಕೆ ಬಂದ 24 ಗಂಟೆಗಳೊಳಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುವುದು. ಕೆಲವೆಡೆ ಮೇವಿನ ಕೊರತೆ ಉದ್ಭವಿಸಿದ್ದು, ಖರೀದಿಗೆ ಸಿದ್ಧತೆ ಆರಂಭಿಸುವುದಕ್ಕೂ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದರು.

       ರಾಜ್ಯದ ಎಲ್ಲ ತಾಲ್ಲೂಕು ಕಚೇರಿಗಳಲ್ಲಿ ಇ–ಆಫೀಸ್‌ ತಂತ್ರಾಂಶದ ಮೂಲಕ ಕಡತ ವಿಲೇವಾರಿ ಆರಂಭಿಸಲಾಗಿದೆ. ಕೆಲವು ಹೋಬಳಿ ಕೇಂದ್ರಗಳಲ್ಲೂ ಆರಂಭವಾಗಿದೆ. ಹೊಸ ಕಡತಗಳನ್ನು ಕಡ್ಡಾಯವಾಗಿ ಇ–ಆಫೀಸ್‌ ತಂತ್ರಾಂಶದಲ್ಲೇ ಆರಂಭಿಸುವಂತೆ ಸೂಚಿಸಲಾಗುವುದು ಎಂದು ಸಚಿವರು ತಿಳಿಸಿದರು.

      ವ್ಯಾಜ್ಯಗಳಿಲ್ಲದ ಮತ್ತು ತೊಡಕುಗಳಿಲ್ಲದ ಪ್ರಕರಣಗಳಲ್ಲಿ ಆಸ್ತಿ ಖರೀದಿ, ವಿಭಾಗದ ಬಳಿಕ ತಂತ್ರಾಂಶದ ಮೂಲಕವೇ ಮ್ಯುಟೇಷನ್‌ ಸೃಜನೆಗೆ ಅವಕಾಶ ಕಲ್ಪಿಸುವ ಚಿಂತನೆ ನಡೆದಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link