ತುಮಕೂರು:
ದೀಪಾವಳಿ ನೆಪದಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಸಿನಿಮಾ ಹಾಡುಗಳಿಗೆ ನೃತ್ಯ, ರೇರಾ ಕಾಯ್ದೆ ಅನುಷ್ಟಾನ, ವಿಧಾನ ಪರಿಷತ್ ಮತದಾರರ ಪಟ್ಟಿಯಲ್ಲಿ ಗೊಂದಲ ಸೇರಿದಂತೆ ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗಿದ್ದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ನಿರೀಕ್ಷೆಯಂತೆಯೇ ವರ್ಗಾವಣೆಯಾಗಿದ್ದಾರೆ.
ನೂತನ ಜಿಲ್ಲಾಧಿಕಾರಿಯಾಗಿ 2014ಬ್ಯಾಚ್ ಐಎಎಸ್ ಅಧಿಕಾರಿ ಇಂಜಿನಿಯರಿಂಗ್ ಪದವೀಧರೆ ಶುಭಾಕಲ್ಯಾಣ್ ನೇಮಕವಾಗಿದ್ದಾರೆ. ಪ್ರಸ್ತುತ ಪಂಚಾಯತ್‌ರಾಜ್ ಇಲಾಖೆ ಇ-ಆಡಳಿತ ನಿರ್ದೇಶಕಿಯಾಗಿ ಕರ್ತವ್ಯದಲ್ಲಿದ್ದರು.
ಶುಭಾಕಲ್ಯಾಣ್ ತುಮಕೂರು ಜಿಲ್ಲೆಗೆ ಪರಿಚಿತ ಅಧಿಕಾರಿಯಾಗಿದ್ದಾರೆ. 2020ರ ಜನವರಿಯಿಂದ ಎರಡು ವರ್ಷ ತುಮಕೂರು ಜಿಪಂ ಸಿಇಒ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಭಾರತೀಯ ಚುನಾವಣಾ ಆಯೋಗದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ನೂತನ ಜಿಲ್ಲಾಧಿಕಾರಿಗೆ ಮುಂಬರುವ ಲೋಕಸಭಾ ಹಾಗೂ ವಿಧಾನಪರಿಷತ್ ಚುನಾವಣೆ ನಿರ್ವಹಣೆಯ ಹೊಣೆಗಾರಿಕೆಯೂ ಇದೆ.
ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶುಭಾಕಲ್ಯಾಣ ಭೌಗೋಳಿಕವಾಗಿ ರಾಜ್ಯದ 2ನೇ ಅತೀದೊಡ್ಡ ಜಿಲ್ಲೆಯಾಗಿರುವ ತುಮಕೂರು ಜಿಲ್ಲೆಯಲ್ಲಿರುವ 10 ತಾಲೂಕು ತೀವ್ರ ಬರಪೀಡಿತವಾಗಿದ್ದು ಕುಡಿಯುವ ನೀರು, ಬರ ನಿರ್ವಹಣೆಯ ನಿಭಾಹಿಸುವ ಹೊಣೆ ನೂತನ ಜಿಲ್ಲಾಧಿಕಾರಿ ಮೇಲಿದೆ.