ಬೆಂಗಳೂರು:
ಕನ್ನಡ ನಾಮಫಲಕಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಡಿಸೆಂಬರ್ 27ರಂದು (ಬುಧವಾರ) ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳಿಗೆ ಆಗ್ರಹಿಸಿ ನಡೆಸಲಾದ ಚಳವಳಿಗೆ ಸಂಬಂಧಿಸಿ ಬಂಧಿತರಾದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಜನರನ್ನು ದೇವನಹಳ್ಳಿಯಲ್ಲಿ ನ್ಯಾಯಾಧೀಶರ ಮುಂದೆ ಇಂದು ಬೆಳಗ್ಗೆ ಹಾಜರುಪಡಿಸಲಾಗಿತ್ತು. ನಾರಾಯಣಗೌಡರು ಸೇರಿದಂತೆ ಎಲ್ಲರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು ಎಲ್ಲಾ ಬಂಧಿತರನ್ನು ಪರಪ್ಪನ ಅಗ್ರಹಾರ ಕಾರಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಬಂಧನದ ಬೆನ್ನಲ್ಲೇ ಎಲ್ಲಾ ಸಚಿವರ ನಿವಾಸ ಮುಂದೆ ಪ್ರತಿಭಟನೆ ನಡೆಸುವಂತೆ ನಾರಾಯಣಗೌಡರು ಕರೆ ಕೊಟ್ಟಿದ್ದಾರೆ. ಬೆಳಗ್ಗೆಯಿಂದ ಊಟ ನೀಡಿಲ್ಲ, ಔಷಧಿಯನ್ನು ನೀಡಿಲ್ಲ. ನನ್ನ ಮೊಬೈಲ್ ಕಸಿದು ನೋವುಂಟು ಮಾಡಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಕಾರ್ಯಕರ್ತರನ್ನ ಬಂಧನ ಮಾಡಿದ್ದಾರೆ ಎಂದು ನಾರಾಯಣಗೌಡರು ಆರೋಪಿಸಿದರು.
ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಜೈಲಿಗೆ ಹಾಕಲು ಕರೆದುಕೊಂಡು ಹೋಗುವ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ನಾರಾಯಣ ಗೌಡರು ಇದೊಂದು ಮುಠ್ಠಾಳ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ನಾರಾಯಣ ಗೌಡ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ. ಹೆದ್ದಾರಿ ತಡೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, (IPC 353) ರಡಿ ಪ್ರಕರಣವನ್ನು ನಾರಾಯಣ ಗೌಡ ಸೇರಿ ಸಂಘಟನೆಯ ಇನ್ನಿತರ ಕಾರ್ಯಕರ್ತರ ಮೇಲೆ ದಾಖಲು ಮಾಡಿಕೊಳ್ಳಲಾಗಿದೆ. ನಾರಾಯಣ ಗೌಡರ ಜತೆ 29 ಮಂದಿಯನ್ನು ಜೈಲಿಗೆ ಹಾಕಲಾಗಿದೆ.
ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪ ದಾಖಲಾಗಿದೆ. ನಾರಾಯಣ ಗೌಡ ಸೇರಿ 6 ಮಂದಿ ವಿರುದ್ದ ಪಿಎಸ್ ಐ ಲಿತೀನ್ ದೂರಿನನ್ವಯ ಚಿಕ್ಕಜಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.