ಚಿಕ್ಕೋಡಿ:
ನಾನು ಯಾವುದೇ ಕಾರಣಕ್ಕೂ ಚೆಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ, ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಫುಟ್ಬಾಲ್ ರೀತಿ ಬಳಸಿಕೊಳ್ಳಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ಗೆ ವಿಧಾನಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಸಿಡಿಮಿಡಿಗೊಂಡಿದ್ದಾರೆ.
ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ಸಂತುಬಾಯಿ ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೊದಲೊಮ್ಮೆ ಶಾಸಕ ಸ್ಥಾನದಲ್ಲಿ ಇದ್ದೆ, ರಾಜೀನಾಮೆ ಕೊಡಿಸಿ ಲೋಕಸಭೆಗೆ ಸ್ಪರ್ಧೆಗೆ ಇಳಿಸಿದರು. ಸದ್ಯ ನಾನು ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯನಾಗಿ ಕಾರ್ಯವನ್ನು ಮಾಡುತ್ತಿದ್ದೇನೆ. ಮತ್ತೆ ಲೋಕಸಭಾ ಸ್ಪರ್ಧೆ ಅಂದ್ರೆ ನನ್ನನ್ನು ಏನ್ ಫುಟ್ಬಾಲ್ ರೀತಿ ತಿಳಿದಿದ್ದಾರೇನೋ? ನಾನು ಯಾವುದೇ ಕಾರಣಕ್ಕೂ ದೆಹಲಿ ರಾಜಕಾರಣ ಮಾಡುವುದಿಲ್ಲ ಎಂದು ತಿಳಿಸಿದರು.
ಶಿಕ್ಷಕರ ಮತಕ್ಷೇತ್ರದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ, ನನ್ನ ಅಧಿಕಾರಾವಧಿ ಆರು ವರ್ಷ ಇದೆ. ನನ್ನ ಆಯ್ಕೆ ಮತ್ತೆ ಚುನಾವಣೆಗೆ ನಿಲ್ಲುವುದಕ್ಕೆ ಅಲ್ಲ, ಚುನಾವಣೆ ಎಂಬುದು ಫುಟ್ಬಾಲ್ ಮ್ಯಾಚ್ ರೀತಿ ಅಲ್ಲ, ನನ್ನ ಅವಧಿ ಇನ್ನೂ ಐದು ವರ್ಷ ಇದೆ. ವಿಧಾನಪರಿಷತ್ ಸದಸ್ಯನಾಗಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೇನೆ. 12 ರಿಂದ 13 ಕೋಟಿ ರೂಪಾಯಿಯನ್ನು ಈಗಾಗಲೇ ಶಿಕ್ಷಕರ ಏಳಿಗೆಗಾಗಿ ಖರ್ಚು ಮಾಡಲಾಗಿದೆ.
ವಾಯವ್ಯ ಶಿಕ್ಷಕರ ಮತಕ್ಷೇತ್ರ ದೊಡ್ಡದಾಗಿರುವುದರಿಂದ ಇಲ್ಲಿ ಶಿಕ್ಷಕರ ಕೊಂದುಕೊರತೆಗಳು ಬಹಳಷ್ಟಿವೆ. ಅವರ ಕೆಲಸಗಳನ್ನು ಮಾಡುತ್ತ ನಾನು ಮುಂದುವರೆಯುತ್ತೇನೆ. ಯಾವುದೇ ಕಾರಣಕ್ಕೂ ನಾನು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ಸ್ಪರ್ಧೆ ಮಾಡುವವರು ಮಾಡಲಿ ಎಂದರು.
ಸಿಎಂ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧೆ ಮಾಡು ಅಂತ ಹೇಳಿದರೂ ನಾನು ಸ್ಪರ್ಧೆ ಮಾಡುವುದಿಲ್ಲ. ಅವರಿಗೆ ನಾನು ಯಾವುದೇ ಲಿಖಿತ ರೂಪದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಬರೆದುಕೊಟ್ಟಿಲ್ಲ. ಆ ರೀತಿ ಯಾವುದೇ ನಿಯಮಗಳು ಕೂಡ ಇಲ್ಲ, ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ನಾನು ವಾಯವ್ಯ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೇನೆ, ವಿಧಾನಪರಿಷತ್ ಸದಸ್ಯರಾಗಿ ನಾನು ಮುಂದುವರೆಯುತ್ತೇನೆ.
ನಾನು ಯಾವುದೇ ಪರಿಸ್ಥಿತಿ ಬಂದರೂ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಎಷ್ಟೇ ಒತ್ತಡ ಬಂದರೂ, ನಾನು ಶಿಕ್ಷಕರ ಮತಕ್ಷೇತ್ರದಲ್ಲಿ ಮುಂದುವರಿಯುತ್ತೇನೆ ಎಂದರು.