ನವದೆಹಲಿ:
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸ್ಥಗಿತದ ಕುರಿತು ಆರ್ ಬಿಐ ಹೊರಡಿಸಿರುವ ಆದೇಶದ ಸುದ್ದಿ ಹಸಿರಾಗಿರುವಂತೆಯೇ ಇದೀಗ ಅಂತಹುದೇ ಮತ್ತೊಂದು ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಂತಾರಾಷ್ಟ್ರೀಯ ಮಟ್ಟದ ಟೆಕ್ ದೈತ್ಯ ಗೂಗಲ್ ಸಂಸ್ಥೆಯ ಗೂಗಲ್ ಪೇ ಆ್ಯಪ್ ತನ್ನ ಸೇವೆ ಸ್ಥಗಿತ ಗೊಳಿಸಲಿದೆ. ಹೌದು..ಅಮೆರಿಕದಲ್ಲಿ ಗೂಗಲ್ ಪೇ ಸೇವೆ ಸ್ಥಗಿತಗೊಳ್ಳುತ್ತಿದ್ದು, 2024ರ ಜೂನ್ 4ರಿಂದಲೇ ಅಮೆರಿಕದಲ್ಲಿ ಗೂಗಲ್ ಪೇ ಆ್ಯಪ್ ಕಾರ್ಯಾಚರಣೆಯು ಸ್ಥಗಿತಗೊಳ್ಳಲಿದೆ ಎಂದು ಕಂಪನಿಯೇ ಮಾಹಿತಿ ನೀಡಿದೆ.
ಅಮೆರಿಕದಲ್ಲಿ (USA) ಮಾತ್ರ ಸ್ಥಗಿತವಾಗುವ ಹಿನ್ನಲೆಯಲ್ಲಿ ಭಾರತೀಯರಿಗೆ (Indians) ಯಾವುದೇ ತೊಂದರೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಗೂಗಲ್ ಪೇ ಆ್ಯಪ್ ಕಾರ್ಯಾಚರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ ಎಂದು ಕಂಪನಿಯೇ ಸ್ಪಷ್ಟನೆ ನೀಡಿದೆ. “ಭಾರತ ಹಾಗೂ ಸಿಂಗಾಪುರದಲ್ಲಿ ಕೋಟ್ಯಂತರ ಜನ ಗೂಗಲ್ ಪೇ ಆ್ಯಪ್ ಬಳಸುತ್ತಿದ್ದಾರೆ. ಹಾಗಾಗಿ, ಎರಡೂ ದೇಶಗಳಲ್ಲಿ ಆ್ಯಪ್ ಕಾರ್ಯಾಚರಣೆ ಮುಂದುವರಿಯಲಿದೆ. ಜನರು ಎಂದಿನಂತೆ ಗೂಗಲ್ ಪೇ ಮೂಲಕ ಹಣ ಪಾವತಿ, ವರ್ಗಾವಣೆ ಮಾಡಬಹುದಾಗಿದೆ. ಈ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ” ಎಂದು ಕಂಪನಿ ತಿಳಿಸಿದೆ.
ಅಮೆರಿಕದಲ್ಲಿ ಗೂಗಲ್ ವ್ಯಾಲೆಟ್ ಪ್ಲಾಟ್ಫಾರ್ಮ್ ಲಭ್ಯವಾಗಲಿದ್ದು, ಜನರು ಅದರ ಮೂಲಕವೇ ವಹಿವಾಟು ನಡೆಸಬಹುದಾಗಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ. ಗೂಗಲ್ ವ್ಯಾಲೆಟ್ ಮೂಲಕವೂ ಅಮೆರಿಕದಲ್ಲಿ ಗ್ರಾಹಕರು ಹಣ ವರ್ಗಾವಣೆ, ಕ್ರೆಡಿಟ್ ಕಾರ್ಡ್ ಅಟ್ಯಾಚ್ ಸೇರಿ ಹಲವು ಸೌಲಭ್ಯಗಳಿವೆ.
ಗೂಗಲ್ ಪೇ ಆ್ಯಪ್ ಕಾರ್ಯಾಚರಣೆಯಲ್ಲಿ ಇನ್ನಷ್ಟು ಸರಳ ಫೀಚರ್ಗಳನ್ನು ಅಳವಡಿಸುವ ದಿಸೆಯಲ್ಲಿ ಗೂಗಲ್ ಪೇ ಆ್ಯಪ್ ಸ್ಥಗಿತಗೊಳಿಸಲಾಗುತ್ತಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಗೂಗಲ್ ಪೇ ಆ್ಯಪ್ ಸ್ಥಗಿತವಾದರೂ, ಈಗ ಗ್ರಾಹಕರು ಗೂಗಲ್ ವ್ಯಾಲೆಟ್ ಮೂಲಕ ವಹಿವಾಟು ನಡೆಸಬಹುದಾಗಿದೆ ಎಂದು ತಿಳಿಸಿದೆ. ಗೂಗಲ್ ವ್ಯಾಲೆಟ್ಗೆ ಗೂಗಲ್ ಪೇ ಫೀಚರ್ಗಳನ್ನು ಮೈಗ್ರೇಟ್ (ವರ್ಗಾವಣೆ) ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇಲ್ಲವೇ ಹೊಸ ಆ್ಯಪ್ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ