ಮಂಡ್ಯ:
ಲೋಕಸಭಾ ಚುನಾವಣೆ ಹೊತ್ತಲ್ಲಿ ಮಂಡ್ಯ ಕಾಂಗ್ರೆಸ್ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಉದ್ಯಮಿ ಸ್ಟಾರ್ ಚಂದ್ರು ಅವರಿಗೆ ಟಿಕೆಟ್ ಕೊಡಲು ಮುಂದಾಗಿರುವ ಕಾಂಗ್ರೆಸ್ ನಾಯಕರ ವಿರುದ್ಧ ಸ್ಥಳೀಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ಸ್ಟಾರ್ ಚಂದ್ರುಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನಗೊಂಡಿರುವ ಸ್ಥಳೀಯ ಕಾಂಗ್ರೆಸ್ ಮುಖಂಡ ಡಾ ಎಚ್ ಎನ್ ರವೀಂದ್ರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಪಕ್ಷದ ಸದಸ್ಯತ್ವ ಹಾಗು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದ ಡಾ ಎಚ್ಎನ್ ರವೀಂದ್ರ, ಪಕ್ಷದ ವರಿಷ್ಟರು ಸೇರಿ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಊಟ ಹಾಕುವ ಜಿಲ್ಲೆಯ ಜನರನ್ನ ಕಾಂಗ್ರೆಸ್ ನಾಯಕರು ದುಡ್ಡಿನಲ್ಲಿ ಅಳೆಯುತ್ತಿದ್ದಾರೆ. ಸ್ಪಲ್ಪ ದಿನ ಅಷ್ಟೇ ಮಂಡ್ಯದ ಕೆರೆಯಲ್ಲಿ ಬೋಟ್ ನಿಲ್ಲಿಸಿ ಗೋವಾ ತರ ಕ್ಯಾಸಿನೊ ಶುರುಮಾಡ್ತಾರೆ ಎಂದು ರವೀಂದ್ರ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನನ್ನ ಮೇಲೆ ನಂಬಿಕೆ ಇಟ್ಟು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ಕೊಟ್ಟಿದ್ದರು. ಇದೀಗ ವಾತವರಣ ಕಲುಷಿತವಾಗಿದೆ. ಹೀಗಾಗಿ ಕೆಪಿಸಿಸಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೇನೆ ಎಂದರು. ಕೆಪಿಸಿಸಿಯ ಪ್ರತಿಯೊಂದು ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡುತ್ತಾರೆ ಎಂಬ ವಿಶ್ವಾಸ ಇತ್ತು.
ಕಡೆ ಗಳಿಗೆಯಲ್ಲಿ ಮೇಲುಕೋಟೆ ಕ್ಷೇತ್ರವನ್ನು ರೈತ ಸಂಘಕ್ಕೆ ನೀಡಿದ್ದಾರೆ. ರೈತ ಸಂಘಕ್ಕೆ ಬಿಟ್ಟುಕೊಡುವ ಬಗ್ಗೆ ಸೌಜನ್ಯಕ್ಕೂ ಚರ್ಚೆ ಮಾಡದೆ ತೀರ್ಮಾನ ತೆಗೆದುಕೊಂಡರು. ಕಾರ್ಯಕರ್ತರು, ಸ್ಥಳೀಯರು ನಿಮಗೆ ಗುಲಾಮರು, ನೀವು ಹೇಳಿದ ಹಾಗೆ ಕುಣಿಯುವ ಗೊಂಬೆಗಳು ನಾವು ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ