ಬೆಂಗಳೂರು:
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಡಿ ಕೆ ಸುರೇಶ್ ಅವರು ಸಾರ್ವಜನಿಕ ಸಭೆಗಳನ್ನು ನಡೆಸಲು ಪ್ರಾರಂಭಿಸಿದ್ದಾರೆ.
ಪ್ರತಿಸ್ಪರ್ಧಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದೆ. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸುರೇಶ್ ಅವರು ಬಿಡದಿ, ಚನ್ನಪಟ್ಟಣ, ನೆಲಮಂಗಲದಲ್ಲಿ ಸಾರ್ವಜನಿಕ ಸಭೆ ನಡೆಸಿ, ಜ್ಞಾನಭಾರತಿ, ಯಲಚೇನಹಳ್ಳಿಯಲ್ಲಿಯೂ ಪ್ರಚಾರ ಆರಂಭಿಸಿದ್ದಾರೆ.
ಕಾಂಗ್ರೆಸ್ ತಂತ್ರವನ್ನು ಅರಿತುಕೊಡಿರು ಮೈತ್ರಿ ಪಕ್ಷಗಳು ಕೂಡ ಸೋಮವಾರ ಸಭೆ ನಡೆಸಿ ಚುನಾವಣೆ ಸಿದ್ಧತೆಗಳ ಕುರಿತು ಚರ್ಚಿಸಿತು. ಅಭ್ಯರ್ಥಿ ಘೋಷಣೆಗೆ ವಿಳಂಬ ಮಾಡಬೇಡಿ ಎಂದು ಮುಖಂಡರು ಸಲಹೆ ನೀಡುತ್ತಿದ್ದಾರೆ. ಅಭ್ಯರ್ಥಿಯೊಂದಿಗೆ ಜನರ ಮುಂದೆ ಹೋಗಬೇಕು. ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಅಭ್ಯರ್ಥಿಯನ್ನು ಘೋಷಿಸಬೇಕು ಎಂಬ ನಾಯಕರ ಸಲಹೆಗೆ ಎರಡೂ ಪಕ್ಷಗಳು ಸಮ್ಮತಿ ಸೂಚಿಸಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣಾ ಸಿದ್ಧತೆ, ಅಭ್ಯರ್ಥಿ ಆಯ್ಕೆ ಮತ್ತಿತರ ಅಂಶಗಳ ಕುರಿತು ಸೋಮವಾರ ಎನ್‌ಡಿಎ ನಾಯಕರ ಜತೆ ಚರ್ಚೆ ನಡೆಸಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರೊಂದಿಗೆ ಚರ್ಚಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿದು ಬಂದಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಲು ಎಲ್ಲರೂ ಶ್ರಮಿಸೋಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ. 2019 ರಲ್ಲಿ ಕಾಂಗ್ರೆಸ್ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿತ್ತು, ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಪಕ್ಷವು 2.25 ಲಕ್ಷ ಮತಗಳಿಂದ ಗೆಲುವು ಸಾಧಿಸಿತ್ತು.
ಕ್ಷೇತ್ರವಾರು ಲಾಭ ನೋಡುವುದಾದರೇ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕನಕಪುರ, ಕುಣಿಗಲ್, ಆನೇಕಲ್, ರಾಮನಗರ ಮತ್ತು ಮಾಗಡಿ ಕಾಂಗ್ರೆಸ್ ಕೈ ನಲ್ಲಿದೆ, ಉಳಿದ ಮೂರು ಕ್ಷೇತ್ರಗಳು ಬಿಜೆಪಿ-ಜೆಡಿಎಸ್ ಮೈತ್ರಿ ಶಾಸಕರಿದ್ದಾರೆ.
ರಾಮನಗರದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಕಾಂಗ್ರೆಸ್ ನ ಎಚ್‌ಎ ಇಕ್ಬಾಲ್ ಹುಸೇನ್ ವಿರುದ್ಧ 10,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಒಕ್ಕಲಿಗರ ಪ್ರಮುಖ ಪ್ರದೇಶವಾದ ಈ ಭಾಗದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ರಣತಂತ್ರ ರೂಪಿಸುತ್ತಿದ್ದಾರೆ.