ಒಕ್ಕೂಟ ವ್ಯವಸ್ಥೆಗೆ ಕೋಂದ್ರದಿಂದ ದಕ್ಕೆ : ಡಾ. ಜೀ ಪರಮೇಶ್ವರ್‌

ತುಮಕೂರು

    ಕೇಂದ್ರದಲ್ಲಿ 10 ವರ್ಷಗಳ ಕಾಲ ಆಡಳಿತ ನಡೆಸಿರುವ ಎನ್‌ಡಿಎ ಸರ್ಕಾರದ ಜನ ವಿರೋಧಿ ಧೋರಣೆ ಮತ್ತು ನೀತಿಯಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ರಾಜ್ಯ ಮತ್ತು ದೇಶಾದ್ಯಂತ ಬಿಜೆಪಿ ಅಭ್ಯರ್ಥಿಗಳನ್ನು ಮತದಾರರು ತಿರಸ್ಕರಿಸಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಮನವಿ ಮಾಡಿದರು.

   ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ದೆಹಲಿ ಹೋಗಿ ಪ್ರತಿಭಟನೆ ನಡೆಸಬೇಕಾಯಿತು. ಆದರೂ ಪ್ರಧಾನಮಂತ್ರಿಯಾಗಲೀ, ಕೇಂದ್ರ ಗೃಹ ಸಚಿವರಾಗಲೀ ಸಮಸ್ಯೆಗಳನ್ನು ಸರಿಪಡಿಸುವ ಭರವಸೆಯನ್ನು ನೀಡಲಿಲ್ಲ. ಇದನ್ನು ಗಮನಿಸಿದರೆ  ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ ಎಂಬುದು ಗೊತ್ತಾಗುತ್ತದೆ. ಹಾಗಾಗಿ ರಾಜ್ಯ ಮತ್ತು ದೇಶಾದ್ಯಂತ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.

    ರಾಜ್ಯದಿಂದ 26 ಮಂದಿ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದರೂ ಸಹ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಅನ್ಯಾಯ ಮಾಡಿದೆ. ಜಿಎಸ್‌ಟಿ ತೆರಿಗೆ ಪಾಲು, ಬರ ಪರಿಹಾರ ಬಿಡುಗಡೆ ಸೇರಿದಂತೆ ಎಲ್ಲ ವಿಚಾರದಲ್ಲೂ ನಮ್ಮ ರಾಜ್ಯವನ್ನು ಕಡೆಗಣಿಸುತ್ತಲೇ ಬರುತ್ತಿದೆ. ಆದರೂ ಯಾವೊಬ್ಬ ಬಿಜೆಪಿ ಸಂಸದರೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

   ಇತಿಹಾಸದಲ್ಲೇ ಕರ್ನಾಟಕಕ್ಕೆ ಇಷ್ಟೊಂದು ಬರಗಾಲ ಬಂದಿರಲಿಲ್ಲ. ಈ ಭೀಕರ ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ನಿಭಾಯಿಸುತ್ತಿದ್ದು, ರಾಜ್ಯದಲ್ಲಿ ಬರದಿಂದಾಗಿ 36 ಸಾವಿರ ಕೋಟಿ ನಷ್ಟ ಉಂಟಾಗಿದ್ದರೂ ಸಹ ಕೇವಲ 18 ಸಾವಿರ ಕೋಟಿ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ. ಆದರೂ ಇದುವರೆಗೂ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಯಿಂದಾಗಿ ರಾಜ್ಯದ ಜನತೆ ಸಂಕಷ್ಟ ಅನುಭವಿಸುವಂತಾಗಿದೆ. ಆದರೆ ರಾಜ್ಯ ಸರ್ಕಾರ ತನ್ನ ಹಣದಲ್ಲೇ ಪ್ರತಿಯೊಬ್ಬ ರೈತರಿಗೂ 2 ಸಾವಿರ ರೂ. ಬರ ಪರಿಹಾರವನ್ನು ನೀಡಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಂಡಿದೆ ಎಂದರು.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಅನುದಾನವನ್ನು ನೀಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಲು ರಾಜ್ಯ ಕೃಷಿ ಸಚಿವರು ಸಮಯ ಕೇಳಿದರೂ ಇದುವರೆಗೂ ನೀಡಿಲ್ಲ. ಮುಖ್ಯಮಂತ್ರಿಗಳು ಪ್ರಧಾನಿಗಳನ್ನು ಭೇಟಿ ಮಾಡಲು 7 ಬಾರಿ ಪತ್ರ ಬರೆದರೂ ಅವಕಾಶ ಮಾಡಿಕೊಲಿಲ್ಲ. 8ನೇ ಬಾರಿಗೆ ಅವಕಾ ನೀಡಿದರು ಎಂದರು.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಅನುದಾನ ರಾಜ್ಯಕ್ಕೆ ಕೊಡಬೇಕಾಗಿರುವುದು ನಮ್ಮ ಹಕ್ಕು. ಈ ಹಣವನ್ನು ನೀಡದೆ ಸತಾಯಿಸುತ್ತಿರುವುದು ಕೇಂದ್ರ ಹಣಕಾಸು ಸಚಿವರಿಗೆ ನಾಚಿಕೆಯಾಗಬೇಕು. ಈ ವಿಚಾರದಲ್ಲಿ ಅತಿ ದೊಡ್ಡ ಸಳ್ಳನ್ನು ಅರ್ಥ ಸಚಿವರು ಹೇಳುತ್ತಿದ್ದಾರೆ. ಈ ಸಂಬಂಧ ಚರ್ಚೆಗೆ ಬರುವಂತೆ ರಾಜ್ಯದ ಕಂಚಾಯ ಸಚಿವರು ಸವಾಲು ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.

   ಕೇಂದ್ರಕ್ಕೆ ಕರ್ನಾಟಕದಲ್ಲಿ 4.50 ಲಕ್ಷ ಸಾವಿರ ಕೋಟಿ ಜಿಎಸ್‌ಟಿ ತೆರಿಗೆ ಹಣವನ್ನು ಸಂಗ್ರಹಿಸಿ ನೀಡಲಾಗುತ್ತಿದೆ. ದೇಶದಲ್ಲೇ ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆದರೂ ನಮ್ಮ ಪಾಲಿನ ತೆರಿಗೆ ಹಣವನ್ನು ಸಮರ್ಪಕವಾಗಿ ಕೇಂದ್ರ ಸರ್ಕಾರ ನೀಡುತ್ತಿಲ್ಲ. 2021-22 ರಲ್ಲಿ ಶೇ. 3.2 ರಷ್ಟು ಮಾತ್ರ ತೆರಿಗೆ ಪಾಲನ್ನು ನಮ್ಮ ರಾಜ್ಯ ಕೊಟ್ಟಿದೆ. ಇದರಿಂದ ಕೇಂದ್ರ ಮತ್ತು ರಾಜ್ಯದ ಸಂಬಂಧ ಹಾಳಾಗಿದೆ ಎಂದರು.

   15ನೇ ಹಣಕಾಸಿನ ಆಯೋಗ ಬೆಂಗಳೂರಿಗೆ ಬಂದಾಗ 5 ಸಾವಿರ ಕೋಟಿ ರೂ. ಹೆಚ್ಚು ನೀಡಬಹುದು ಎಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಈವರೆಗೂ ನಮಗೆ ಅಷ್ಟು ಪಾಲಿನ ಹಣವನ್ನು ಕೊಟ್ಟಿಲ್ಲ. ರಾಜ್ಯದಿಂದ ಪ್ರತಿನಿಧಿಸಿರುವ ನಿರ್ಮಲಾ ಸೀತರಾಮನ್ ಅವರಿಗೆ ನಮಗೆ ಕೊಡಬೇಕಾಗಿರುವ ಪಾಲನ್ನು ಕೊಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

   ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ತೀರಾ ಕೀಳಾಗಿ ಕಾಣುತ್ತಿದೆ. ವಿರೋಧ ಪಕ್ಷಗಳು ಆಡಳಿತದಲ್ಲಿರುವ ಸರ್ಕಾರಗಳನ್ನು ಟಾರ್ಗೆಟ್ ಮಾಡಿ ಆ ಸರ್ಕಾರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದರು.

   ಕೇಂದ್ರ ಸರ್ಕಾರದ ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಘೋಷಣೆ ಮಾಡಿತ್ತು. ಆದರೆ ಇದುವರೆಗೂ ಒಂದು ರೂಪಾಯಿ ಸಹ ಬಿಡುಗಡೆ ಮಾಡಿಲ್ಲ. ಇಂತಹ ಪಕ್ಷಕ್ಕೆ ಜನರು ಮತ ಹಾಕೇಬೇಕೆ ಎಂದು ಅವರು ಪ್ರಶ್ನಿಸಿದರು.ಕಳೆದ ವಿಧಾನಸಭಾ ಚುನಾವಣೆಗೆ ಮೊದಲು ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಲಾಗಿತ್ತು. ಅದರಂತೆ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಅನುಷ್ಠಾನಗೊಳಿಸಿದ್ದೇವೆ. ಬೇರೆ ಯಾವುದೇ ಯೋಜನೆ ಮತ್ತು ಕಾರ್ಯಕ್ರಮಗಳನ್ನು ನಿಲ್ಲಿಸಿ, ಗ್ಯಾರಂಟಿ ಯೋಜನೆಗಳನ್ನು ನೀಡಿಲ್ಲ. ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಹಣ ಒದಗಿಸುತ್ತಿದ್ದೇವೆ ಎಂದರು.

   ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 136 ಸೀಟುಗಳನ್ನು ಗೆದ್ದು ಸ್ಥಿರ ಸರ್ಕಾರವನ್ನು ನಡೆಸುತ್ತಿದ್ದೇವೆ. ಬಡತನ ನಿರ್ಮೂಲನೆ, ಯುವಕರಿಗೆ ಉದ್ಯೋಗ, ರೈತರಿಗೆ ಸಹಕಾರ ಕೊಡುವುದು ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿದೆ ಎಂದರು.

ಎಸ್‌ಪಿಎಂ ಗೆಲ್ಲಿಸಲು ಮನವಿ

   ತುಮಕೂರು ಜಿಲ್ಲೆಯಲ್ಲಿ ಸರಳ, ಸಜ್ಜನಿಕೆಯ ಎಸ್.ಪಿ. ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಮತ್ತೊಮ್ಮೆ ಅವರನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಮುದ್ದಹನುಮೇಗೌಡರು ಸಜ್ಜನ ವ್ಯಕ್ತಿಯಾಗಿ, ವಿದ್ಯಾವಂತನಾಗಿ, ನ್ಯಾಯಾದೀಶರಾಗಿ ಕೆಲಸ ಮಾಡಿ ಸಾರ್ವಜನಿಕ ಬದುಕಿಗೆ ಬಂದಿದ್ದಾರೆ. 35 ವರ್ಷದಿಂದ ಅವರ ನಡೆ-ನುಡಿ, ಕೆಲಸ ಕಾರ್ಯಗಳನ್ನು ಜನಸಮುದಾಯ ಗಮನಿಸಿದೆ.

   ತನ್ನ ವ್ಯಕ್ತಿವನ್ನು ಹಾಳುಮಾಡಿಕೊಳ್ಳುವ ಕೆಲಸವನ್ನು ಅವರು ಎಂದೂ ಮಾಡಿಲ್ಲ. ಗೊಂದಲ ತೀರ್ಮಾನ ಯಾವತ್ತು ಮಾಡಿಕೊಂಡಿಲ್ಲ. 2014ರಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿತ್ತು. ಜನರು ಪ್ರೀತಿಯಿಂದ ಗೆಲ್ಲಿಸಿದ್ದರು. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ 44 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇದರಲ್ಲಿ ಮುದ್ದಹನುಮೇಗೌಡರು ಒಬ್ಬರು. ತನಗೆ ಸಿಕ್ಕ ಅವಕಾಶದಲ್ಲಿ ಕ್ರೀಯಶೀಲವಾಗಿ ಬಳಸಿಕೊಂಡರು. ರಾಜ್ಯದ, ಜಿಲ್ಲೆಯ ಸಮಸ್ಯೆಗಳನ್ನು ಸಂಸತ್‌ನಲ್ಲಿ ಪರಿಣಾಮಕಾರಿಯಾಗಿ ಪ್ರಸ್ತಾಪಿಸುವ ಕೆಲಸ ಮಾಡಿದ್ದರು ಎಂದರು‌.

   ಆಂಧ್ರದ ರಘುವೀರರೆಡ್ಡಿಯವರು ರಾಯದುರ್ಗಕ್ಕೆ ರೈಲು ಮಾರ್ಗದ ಬಗ್ಗೆ ಪ್ರಸ್ತಾಪಿಸಿದಾಗ ಲಾಲು ಪ್ರಸಾದ್ ಯಾದವ್ ಅವರು ಪಿಂಕ್ ಪುಸ್ತಕದಲ್ಲಿ ಸುಮಾರು ಸುಮಾರು 92 ಲಕ್ಷ ರೂ. ಮೀಸಲಿಟ್ಟಿದ್ದರು. ಭೂಮಿ ಸ್ವಾಧೀನ ಸಂಪೂರ್ಣವಾಗಿ ಆಗಲಿಲ್ಲ. ಆಂಧ್ರ ಭಾಗದಲ್ಲಿ ಪೂರ್ಣಗೊಂಡಿತು. ವಿರೋಧ ಪಕ್ಷದಲ್ಲಿದ್ದುಕೊಂಡು ಮುದ್ದಹನುಮೇಗೌಡರು ತುಮಕೂರಿನಿಂದ ದಾವಣಗೆರೆಗೆ ರೈಲು ಮಾರ್ಗ ಪ್ರಸ್ತಾಪಿಸಿದರು.

  ಭದ್ರಾ ಮೇಲ್ದಂಡೆ ಯೋಜನೆಯನ್ನು, ಹುಬ್ಬಳ್ಳಿ-ಧಾರವಾಡ ಜಿಲ್ಲೆಗೆ ಕುಡಿಯುವ ನೀರು ಮಹದಾಯಿ ಯೋಜನೆಯನ್ನು ಪ್ರಸ್ತಾಪಿಸಿದರು. ಕೊಬ್ಬರಿ ಬೆಲೆ ನಿಯಂತ್ರಿಸುವ ನಾಫೆಡ್ ಬಗ್ಗೆ ಪ್ರಸ್ತಾಪಿಸಿ ಸಮಸ್ಯೆಯನ್ನು ಬಗೆಹರಿಸುವ ಕೆಲಸ‌ ಮಾಡಿದ್ದರು ಎಂದು ಹೇಳಿದರು.

   ಕ್ರಿಯಾಶೀಲ ಲೋಕಸಭಾ ಸದಸ್ಯನಾಗಿ ಸತತವಾಗಿ ಕೆಲಸ ಮಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮುದ್ದಹನುಮೇಗೌಡರನ್ನು ವಿಶ್ವಸಂಸ್ಥೆಗೆ ಪ್ರತಿನಿಧಿಯನ್ನಾಗಿ ಕಳುಹಿಸಿದರು. ಮತ್ತೊಮ್ಮೆ ಪ್ರತಿನಿಧಿಸಲು ಎಲ್ಲ ಅರ್ಹತೆ ಅವರಿಗಿದೆ. ಹೀಗಾಗಿ ಎಐಸಿಸಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

   ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಕೇಂದ್ರದ ಮಲತಾಯಿ ಧೋರಣೆ ಖಂಡನೀಯ. ಎನ್‌ಡಿಆರ್‌ಎಫ್ ಹಣ ಭಿಕ್ಷೆಯಲ್ಲ, ನಮ್ಮಗೂ ಅದರ ಮೇಲೆ ಹಕ್ಕಿದೆ. ಕೇಂದ್ರದಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಗುಡುಗಿದರು.

   ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಚುನಾವಣೆಯಲ್ಲಿ ತುಮಕೂರು ಸೇರಿದಂತೆ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಬೇಕು. ಈ ಮೂಲಕ ಏಕೆ ಹೀಗೆ ಆಯಿತು ಎಂದು ಬಿಜೆಪಿ ನಾಯಕರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಅವರು ಹೇಳಿದರು.ಮಾಜಿ ಸಂಸದ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ, ಇಡೀ ಜಿಲ್ಲೆಯ ಭೌಗೋಳಿಕ ಚಿತ್ರಣ ಬಲ್ಲವನಾಗಿದ್ದೇನೆ. ಮಧುಗಿರಿಯಲ್ಲಿ ಶೇಂಗಾ, ತಿಪಟೂರು ಕೊಬ್ಬರಿ, ತುಮಕೂರು ಗ್ರಾಮಾಂತರದಲ್ಲಿ ರಾಗಿ, ಗುಬ್ಬಿ-ತುರುವೇಕೆರೆಯಲ್ಲಿ ಚಿರತೆ, ಮಧುಗಿರಿ-ಕೊರಟಗೆರೆಯಲ್ಲಿ ಕರಡಿ ಸಮಸ್ಯೆ ಇದೆ. ಈ ಎಲ್ಲವನ್ನು ಸಮಸ್ಯೆಗಳನ್ನು ಬಲ್ಲವನಾಗಿದ್ದೇನೆ ಎಂದರು.  

   ಜಿಲ್ಲೆಯ ಸಮಸ್ಯೆಗಳೊಂದಿಗೆ ರಾಜ್ಯದ ಸಮಸ್ಯೆಗಳನ್ನು ಚರ್ಚೆ ಮಾಡಲು ಇರುವ ಅತ್ಯಂತ ಪ್ರಮುಖ ಸದನ ಲೋಕಸಭೆ ಎಂದ ಅವರು ಹೇಳಿದರು.ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಮತ್ತೊಮ್ಮೆ ಲೋಕಸಭೆಯಲ್ಲಿ ಜಿಲ್ಲೆ ಮತ್ತು ರಾಜ್ಯದ ಪರವಾಗಿ ಧ್ವನಿಯೆತ್ತಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

   ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ, ಶಾಸಕ ಎಸ್.ಆರ್. ಶ್ರೀನಿವಾಸ್, ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ. ರಫೀಕ್ಅಹಮದ್, ಗಂಗಹನುಮಯ್ಯ, ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.   ಇಂಡಿಯಾ ಒಕ್ಕೂಟದ ಗ್ಯಾರಂಟಿಗಳು :   ದೇಶದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಐಎನ್‌ಡಿಎ (ಇಂಡಿಯಾ) ಒಕ್ಕೂಟ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.ದೇಶದ ರೈತರ ಸಾಲ ಮನ್ನಾ ಮಾಡಲಾಗುವುದು. ರೈತರ ರಕ್ಷಣೆಯ ಕಾಯ್ದೆ ಹೊಸ ಕಾನೂನು, ಜಿಎಸ್‌ಟಿಯಿಂದ ಕೃಷಿ ಕ್ಷೇತ್ರ ಹೊರತುಪಡಿಸುವುದು. ಯುವಕರಿಗೆ ಅಪ್ರೆಂಟಿಸ್ ತರಬೇತಿ ಜತೆಗೆ 1 ಲಕ್ಷ ರೂ. ನೀಡಲಾಗುವುದು, ಮಹಾಲಕ್ಷ್ಮಿ ಗ್ಯಾರಂಟಿ ಯೋಜನೆ ಜಾರಿಗೆ ತಂದು 1 ಲಕ್ಷ ರೂ.ಗಳನ್ನು ಬಡ ಮಹಿಳೆಯರಿಗೆ ನೇರ ನಗದು ವರ್ಗಾವಣೆ ಮಾಡುವುದು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link