ಚಿಕ್ಕಮಗಳೂರು:
ಪ್ರಯತ್ನ ವಿಫಲವಾಗಬಹುದು ಆದರೆ ಪ್ರಾರ್ಥನೆ ವಿಫಲ ಆಗುವುದಿಲ್ಲ ಎಂಬುದು ನನ್ನ ನಂಬಿಕೆ. ಪ್ರಾರ್ಥನೆ ಫಲ ಕೊಡುತ್ತದೆ ಎಂಬ ನಂಬಿಕೆ ನನ್ನದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಪ್ರಚಾರ ನಡುವೆ ದೇವಾಲಯ ದರ್ಶನ ಕೈಗೊಂಡಿರುವ ಡಿಸಿಎಂ ಅವರು ಇಂದು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಅಲ್ಲಿಂದ ಶೃಂಗೇರಿ ಶಾರಂದಾಂಬೆಯ ದರ್ಶನಕ್ಕೆ ತೆರಳಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರೂ ಅವರವರ ಧರ್ಮದ ಬಗ್ಗೆ ನಂಬಿಕೆ ಇಟ್ಟುಕೊಂಡು ಬದುಕಬೇಕು.
ನನ್ನ ಪರವಾಗಿ, ಪಕ್ಷ, ಸರ್ಕಾರದ ಪರವಾಗಿ, ನಮ್ಮನ್ನು ನಂಬಿರುವ ಜನತೆಯ ಪರವಾಗಿ, ಜನತೆಗಾಗಿ ಒಳ್ಳೆಯ ಆಡಳಿತ ಕೊಡುವ ಶಕ್ತಿ ಕೊಡು ಎಂದು ಪ್ರಾರ್ಥನೆ ಮಾಡಿದ್ದೇನೆ. ನಾವು ನುಡಿದಂತೆ ನಡೆಯಲು ಜನ ಶಕ್ತಿ ಕೊಟ್ಟಿದ್ದಾರೆ. ಇದಕ್ಕಿಂತ ಭಾಗ್ಯ ಇನ್ನೇನು ಬೇಕು? 5 ಗ್ಯಾರಂಟಿಗಳಿಗೆ ಬಜೆಟ್ನಲ್ಲಿ ದುಡ್ಡಿಟ್ಟು ಜನತೆಗೆ ಸೇವೆ ಮಾಡುವ ಭಾಗ್ಯ ಕೊಟ್ಟಿದ್ದಾರೆ. ಈ ಗ್ಯಾರೆಂಟಿಗೆ ಐದು ವರ್ಷದ ವಾರಂಟಿ ಇದೆ. ಫ್ಯಾನು, ಕುಕ್ಕರ್ಗೆ ಒಂದು ವರ್ಷ ಗ್ಯಾರಂಟಿ ಕೊಡುತ್ತಾರೆ. ನಮ್ಮ ಗ್ಯಾರೆಂಟಿಗೆ 5 , 10 ವರ್ಷ ಕಾಲದ ವಾರಂಟಿ ಮಾಡು ಎಂದು ಕೇಳಲು ಬಂದಿದ್ದೇನೆ ಎಂದರು.
ತಂಗಡಗಿ ಹೇಳಿಕೆ ಸಮರ್ಥನೆ:
‘ಮೋದಿ ಮೋದಿ’ ಎಂಬ ಘೋಷಣೆ ಕೂಗುವ ಯುವಕರ ಕೆನ್ನೆಗೆ ಬಾರಿಸಬೇಕು ಎಂಬ ಸಚಿವ ಶಿವರಾಜ ತಂಗಡಗಿ ಹೇಳಿಕೆಯನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಆಡು ಭಾಷೆಯಲ್ಲಿ ತಂಗಡಗಿ ಮಾತನಾಡಿದ್ದಾರೆ ಅಷ್ಟೇ. ಅದೇನು ದೊಡ್ಡದಲ್ಲ. ತಂಗಡಗಿಯನ್ನ ಲೀಡರ್ ಮಾಡುತ್ತಿದ್ದಾರೆ ಬಿಜೆಪಿಯವರು, ಮಾಡಲಿ ಎಂದು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಗ್ಗೆ ಏನೂ ಮಾತನಾಡುವುದಿಲ್ಲ. ಇಡೀ ರಾಜ್ಯದ ಬಗ್ಗೆ ಮಾತನಾಡುತ್ತೇನೆ ನಾನು ರಾಜ್ಯದ ವಿಚಾರ ಮಾತನಾಡುತ್ತೇನೆ, ಗ್ರಾಮಾಂತರದ ಬಗ್ಗೆ ಮಾತಾಡುವುದಿಲ್ಲ. ಗ್ರಾಮಾಂತರದಲ್ಲಿ ದೇವೇಗೌಡರ ಸೊಸೆ ಇದ್ದಾಗಲೂ ಇದೇ ಪರಿಸ್ಥಿತಿ ಇತ್ತು. ಅಂದಿಗೂ ಇಂದಿಗೂ ಬಹಳ ವ್ಯತ್ಯಾಸವಿದೆ ಎಂದರು.
ಪ್ರತಿ ಪಂಚಾಯಿತಿಗೆ ಸದಸ್ಯನಾಗಿದ್ದಂತೆ ಸುರೇಶ್ ಸೇವೆ ಮಾಡುತ್ತಿದ್ದಾರೆ. ಸುರೇಶ್ ಬಗ್ಗೆ ಕ್ಷೇತ್ರದ ಪ್ರತಿ ಮನೆಗೂ ಗೊತ್ತು. ಜನ ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದರು.
ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹಾಕುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಅದು ಅವರ ಪಕ್ಷದ ವಿಚಾರ. ಅವರ ಆಯ್ಕೆ. ಮಂಡ್ಯ, ಬೆಂಗಳೂರು, ಗ್ರಾಮಾಂತರ ಚಿಕ್ಕಬಳ್ಳಾಪುರ ಹಾಸನ ಎಲ್ಲಿಯಾದರೂ ಸ್ಪರ್ಧೆ ಮಾಡಲಿ. 2 ಪಾರ್ಟಿ ಸೇರಿ ತೀರ್ಮಾನ ಮಾಡಿದ್ದಾರೆ. ಅವರಿಗೆ ಅನುಕೂಲವಾಗುವ ಕಡೆ ನಿಲ್ಲಲಿ. ಈಗ ನಾವ್ಯಾಕೆ ಅದರ ಬಗ್ಗೆ ಮಾತನಾಡಬೇಕು. ಮೊದಲಿಂದ ನಾವು ಹೇಗೆ ನಡೆದುಕೊಂಡಿರುತ್ತೇಯೋ ಅದರ ಆಧಾರದ ಮೇಲೆ ಜನ ತೀರ್ಮಾನ ಮಾಡುತ್ತಾರೆ ಎಂದರು.