ಬೆಂಗಳೂರು:
ಉದ್ಯಾನನಗರಿ ಬೆಂಗಳೂರಿನ ಪ್ರಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗುರುವಾರ ಮತ್ತಿಬ್ಬರು ಶಂಕಿತರನ್ನು ಬಂಧಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.
ಇಬ್ಬರು ಶಂಕಿತರು ಶಂಕಿತ ಬಾಂಬರ್‌ನೊಂದಿಗೆ ನೇರ ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಎನ್‌ಐಎ ಅಧಿಕಾರಿಗಳು ಶಂಕಿತರನ್ನು ರಾಜ್ಯ ರಾಜಧಾನಿಯ ಪ್ರದೇಶದಿಂದ ಕರೆದೊಯ್ದಿದ್ದಾರೆ. ಆದರೆ, ಈ ಬಗ್ಗೆ ಎನ್‌ಐಎ ಹೇಳಿಕೆ ನೀಡಬೇಕಿದೆ.ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಬುಧವಾರ ಹಲವೆಡೆ ದಾಳಿ ನಡೆಸಿ ಶೋಧ ನಡೆಸಿದ್ದ ಎನ್‌ಐಎ ಇಂದು ಕೂಡ ದಾಳಿ ಮುಂದುವರಿಸಿದೆ.
ರಾಮೇಶ್ವರಂ ಕೆಫೆ ಸ್ಫೋಟ ಸಂಬಂಧ ಎನ್‌ಐಎ ಅಧಿಕಾರಿಗಳು ನಿನ್ನೆ ಬೆಂಗಳೂರಿನ ಐದು ಕಡೆ, ಶಿವಮೊಗ್ಗ ಜಿಲ್ಲೆಯ 15 ಸ್ಥಳಗಳಲ್ಲಿ ಹಾಗೂ ತಮಿಳುನಾಡಿನ ಚೆನ್ನೈಯ ಆರು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು.
ತನಿಖಾ ಸಂಸ್ಥೆಗಳು, ಎನ್‌ಐಎ ಮತ್ತು ರಾಜ್ಯ ವಿಶೇಷ ವಿಭಾಗದ ಸಿಸಿಬಿ ತಂಡಗಳು ವಿವಿಧ ರಾಜ್ಯಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರೂ ಸಹ, ಬಾಂಬ್ ದಾಳಿಯ ಸುಳಿವು ಸಿಕ್ಕಿಲ್ಲ. ಘಟನೆ ನಡೆದ ಕೂಡಲೇ ಅಧಿಕಾರಿಗಳು ಮಾರ್ಚ್ 1 ರಂದು ಸಿಸಿಟಿವಿ ದೃಶ್ಯಾವಳಿಯಿಂದ ಬಾಂಬರ್‌ನ ಚಿತ್ರಗಳು ಮತ್ತು ವೀಡಿಯೊಗಳನ್ನು ಪಡೆದುಕೊಂಡಿದ್ದರು.
ಬಾಂಬರ್ ತಮಿಳುನಾಡಿನಿಂದ ಬಂದಿದ್ದು, ಸ್ಫೋಟ ನಡೆಸುವ ಮೊದಲು ಎರಡು ತಿಂಗಳ ಕಾಲ ನೆರೆಯ ರಾಜ್ಯದಲ್ಲಿ ತಂಗಿದ್ದ ಎಂದು ಗುಪ್ತಚರರು ಶಂಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಧಾರ್ಮಿಕ ಸ್ಥಳದ ಬಳಿ ಬಿಟ್ಟು ಹೋಗಿದ್ದ ಆರೋಪಿಯ ಟೋಪಿಯಿಂದ ಆರೋಪಿಯ ಕೂದಲಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅಧಿಕಾರಿಗಳು ಡಿಎನ್ಎ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಿದ್ದು ತನಿಖೆಯ ಪ್ರಗತಿಯ ನಿರೀಕ್ಷೆಯಲ್ಲಿದ್ದಾರೆ.
ಮಾರ್ಚ್ 1 ರಂದು ಬ್ರೂಕ್ ಫೀಲ್ಡ್ ಪ್ರದೇಶದ ಇಂಟರ್ ನ್ಯಾಷನಲ್ ಟೆಕ್ನಾಲಜಿ ಪಾರ್ಕ್ ಲಿಮಿಟೆಡ್ (ITPL) ರಸ್ತೆಯಲ್ಲಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸಂಭವಿಸಿತ್ತು. ಸ್ಫೋಟವನ್ನು ನಡೆಸಲು ಕಡಿಮೆ-ತೀವ್ರತೆಯ ಸುಧಾರಿತ ಸ್ಫೋಟಕ ಸಾಧನವನ್ನು (IED) ಬಳಸಲಾಗಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.