ಬೆಂಗಳೂರು :
ಮೈಸೂರು ಎಕ್ಸ್‌ಪ್ರೆಸ್ ವೇ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದೆ. ಇದೀಗ ಈ ಹೆದ್ದಾರಿಯ ಟೋಲ್ ಶುಲ್ಕ ಏಪ್ರಿಲ್ 1ರಿಂದ ಹೆಚ್ಚಳ ಆಗಲಿದೆ. ಹಾಗಾದರೆ ಯಾವ್ಯಾವ ವಾಹನಗಳಿಗೆ ಎಷ್ಟು ದರ ನಿಗದಿಪಡಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕಣಮಿಣಕಿ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾವರೆಗಿನ 56 ಕಿಲೋ ಮೀಟರ್ ಉದ್ದದ ಹೆದ್ದಾರಿಗೆ ಈ ಪರಿಷ್ಕರಣೆ ದರ ಅನ್ವಯ ಆಗಲಿದೆ. ಈ ಮೂಲಕ ಒಂದು ವರ್ಷದ ಅವಧಿಯಲ್ಲಿ ಎರಡು ಬಾರಿ ಟೋಲ್ ದರ ಪರಿಷ್ಕರಣೆ ಆಗಿದೆ.
ಕಳೆದ 2023ರ ಏಪ್ರಿಲ್‌ನಲ್ಲಿ ಹೆದ್ದಾರಿ ಪ್ರಾಧಿಕಾರ ಟೋಲ್ ಶುಲ್ಕವನ್ನು ಹೆಚ್ಚಿಗೆ ಮಾಡಿದ್ದು, ಇದಕ್ಕೆ ವಾಹನ ಸವಾರರು, ಸಾರ್ವಜನಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಈ ನಿರ್ಧಾರದಿಂದ ಪ್ರಾಧಿಕಾರ ಹಿಂದೆ ಸರಿದಿತ್ತು. ಆದರೆ ಜೂನ್‌ನಲ್ಲಿ ಮತ್ತೆ ಶೇಕಡಾ 22ರಷ್ಟು ಹೆಚ್ಚಳ ಆಗಿತ್ತು. ಇದಾದ 9 ತಿಂಗಳ ನಂತರ ಮತ್ತೆ ಟೋಲ್ ದರವನ್ನು ಮತ್ತೆ ಏರಿಕೆ ಮಾಡಿದ್ದು, ಇದಕ್ಕೆ ಸಾರ್ವಜನಿಕರ ಪ್ರತಿಕ್ರಿಯೆ ಹೇಗಿರಲಿದೆ ಎಂದು ಕಾದುನೋಡಬೇಕಿದೆ.
“ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ-2008ರ ಪ್ರಕಾರವೇ ಟೋಲ್ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದೆ. ಟೋಲ್ ಪ್ಲಾಜಾದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ವಾಹನಗಳ ಸವಾರರಿಗೆ ಮಾಸಿಕ ಪಾಸ್ ಶುಲ್ಕವನ್ನು 300 ರೂಪಾಯಿ ನಿಗದಿಪಡಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಂಗಳೂರು-ಮೈಸೂರು ಹೆದ್ದಾರಿ ವಿಭಾಗದ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ ತಿಳಿಸಿದ್ದಾರೆ,” ಅಂತಾ ಪ್ರಜಾವಾಣಿ ವರದಿ ಮಾಡಿದೆ.
ಎಲ್ಲಾ ರೀತಿಯ ವಾಹನಗಳು 24 ಗಂಟೆಯೊಳಗೆ ಹಿಂದಿರುಗಿ ಬಂದರೆ ಪಾವತಿಸಬೇಕಾದ ಟೋಲ್‌ನಲ್ಲಿ ಶೇಕಡಾ 25ರಷ್ಟು ರಿಯಾಯಿತಿ ಇರಲಿದೆ. ಅದೇ ರೀತಿ ಎಲ್ಲಾ ವಾಹನಗಳು ಟೋಲ್ ಪಾವತಿ ದಿನದಿಂದ ಒಂದು ತಿಂಗಳೊಳಗೆ 50 ಬಾರಿ ಪ್ರಯಾಣಿಸಿದರೆ ಶೇಕಡಾ 35ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಯಾವುದೇ ವಾಹನ ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಭಾರ ಹೊಂದಿದ್ದರೆ ನಿಗದಿತ ಶುಲ್ಕದ 10 ಪಟ್ಟು ಶುಲ್ಕ ಪಾವತಿಸಿಕೊಂಡು ಭಾರ ಖಾಲಿ ಮಾಡಲಾಗುತ್ತದೆ ಎಂದು ತಿಳಿದಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ, ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಬಳಿ ಹೆದ್ದಾರಿ ಪ್ರಾಧಿಕಾರ ಎರಡು ಟೋಲ್ ಪ್ಲಾಜಾಗಳನ್ನು ನಿರ್ಮಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವವರು ಕಣಮಿಣಕಿ ಬಳಿ ಹಾಗೂ ಮೈಸೂರು-ರಾಮನಗರ ಕಡೆಯಿಂದ ಬೆಂಗಳೂರಿನ ಕಡೆ ಪ್ರಯಾಣ ಮಾಡುವವರು ಶೇಷಗಿರಿಹಳ್ಳಿ ಬಳಿ ಟೋಲ್ ಪಾವತಿಸಬೇಕಿದೆ.
- ಕಾರು, ಜೀಪು, ವ್ಯಾನ್- ಏಕಮುಖ ಸಂಚಾರಕ್ಕೆ ಹಳೆಯ ದರ 135 ರೂಪಾಯಿ, ಹೊಸ ದರ 170 ರೂಪಾಯಿ ಆಗಿದ್ದು, 35 ರೂಪಾಯಿ ಹೆಚ್ಚಳ ಆಗಿದೆ.
- ಲಘು ವಾಹನ, ಮಿನಿ ಬಸ್- ಏಕಮುಖ ಸಂಚಾರಕ್ಕೆ ಹಳೆಯ ದರ 220 ರೂಪಾಯಿ, ಹೊಸ ದರ 275 ರೂಪಾಯಿ ಆಗಿದ್ದು, 55 ರೂಪಾಯಿ ಹೆಚ್ಚಳ ಆಗಿದೆ.
- 2 ಆಕ್ಸಲ್ ಟ್ರಕ್ ಅಥವಾ ಬಸ್- ಏಕಮುಖ ಸಂಚಾರಕ್ಕೆ ಹಳೆಯ ದರ 460 ರೂಪಾಯಿ, ಹೊಸ ದರ 580 ರೂಪಾಯಿ ಆಗಿದ್ದು, 120 ರೂಪಾಯಿ ಹೆಚ್ಚಳ ಆಗಿದೆ.
- 3 ಆಕ್ಸಲ್ ವಾಣಿಜ್ಯ ವಾಹನ – ಏಕಮುಖ ಸಂಚಾರಕ್ಕೆ ಹಳೆಯ ದರ 500 ರೂಪಾಯಿ, ಹೊಸ ದರ 635 ರೂಪಾಯಿ ಆಗಿದ್ದು, 135 ರೂಪಾಯಿ ಹೆಚ್ಚಳ ಆಗಿದೆ.
- ಭಾರಿ ವಾಹನ (4-6 ಆಕ್ಸಲ್) – ಏಕಮುಖ ಸಂಚಾರಕ್ಕೆ ಹಳೆಯ ದರ 720 ರೂಪಾಯಿ, ಹೊಸ ದರ 910 ರೂಪಾಯಿ ಆಗಿದ್ದು, 190 ರೂಪಾಯಿ ಹೆಚ್ಚಳ ಆಗಿದೆ.
- ದೊಡ್ಡ ವಾಹನ (7ಕ್ಕಿಂತ ಹೆಚ್ಚು ಆಕ್ಸಲ್) – ಏಕಮುಖ ಸಂಚಾರಕ್ಕೆ ಹಳೆಯ ದರ 880 ರೂಪಾಯಿ, ಹೊಸ ದರ 1,110 ರೂಪಾಯಿ ಆಗಿದ್ದು, 880 ರೂಪಾಯಿ ಹೆಚ್ಚಳ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ