ನವದೆಹಲಿ:
ಚುನಾವಣಾ ಆಯೋಗ ಬಿಜೆಪಿ ಅಂಗಸಂಸ್ಥೆಯೇ ಎಂದು ದೆಹಲಿ ಸಚಿವರಾದ ಹಿರಿಯ ಎಎಪಿ ನಾಯಕಿ ಅತಿಶಿ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಕ್ಷ ಸೇರುವಂತೆ ಬಿಜೆಪಿ ತನ್ನನ್ನು ಸಂಪರ್ಕಿಸಿದೆ ಅಥವಾ ಒಂದು ತಿಂಗಳೊಳಗೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಸಿದ್ಧರಾಗಿರಿ ಎಂಬ ಟೀಕೆಗಳ ಕುರಿತು ನೋಟಿಸ್ ನೀಡಿದ ಬೆನ್ನಲ್ಲೇ, ಅತಿಶಿ ಈ ರೀತಿ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ತನಗೆ ಇಮೇಲ್ ಮೂಲಕ ನೋಟಿಸ್ ಕಳುಹಿಸುವ ಒಂದು ಗಂಟೆ ಮುನ್ನಾ ಬಿಜೆಪಿಯಿಂದ ಮಾಧ್ಯಮಗಳಿಗೆ ಸೋರಿಕೆಯಾಗಿದೆ ಎಂದು ಆರೋಪಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಮತ್ತು ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ನಂತರ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಚುನಾವಣಾ ಆಯೋಗ ಏಕೆ ನೋಟಿಸ್ ನೀಡಲಿಲ್ಲ ಎಂದು ಕೇಳಿದ ಅವರು, ಚುನಾವಣಾ ಆಯೋಗ ಬಿಜೆಪಿಯ ಅಧೀನ ಸಂಸ್ಥೆಯೇ ಎಂದು ಪ್ರಶ್ನಿಸಿದರು.
ಬಿಜೆಪಿಯ “ಆಕ್ಷೇಪಾರ್ಹ” ಹೋರ್ಡಿಂಗ್‌ಗಳು ಮತ್ತು ಪೋಸ್ಟರ್‌ಗಳ ಬಗ್ಗೆ ಆಮ್ ಆದ್ಮಿ ಪಕ್ಷ (ಎಎಪಿ) ಚುನಾವಣಾ ಸಮಿತಿಗೆ ಹಲವು ಪತ್ರಗಳನ್ನು ಬರೆದಿದೆ. ಆದರೆ ಅವುಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು,
ನೋಟಿಸ್‌ಗೆ ಉತ್ತರಿಸುವುದಾಗಿ ಮತ್ತು ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವಲ್ಲಿ ನಿರೀಕ್ಷಿಸಿದ ತಟಸ್ಥತೆ ಮತ್ತು ಪಕ್ಷಾತೀತತೆಯನ್ನು ಚುನಾವಣಾ ಆಯೋಗಕ್ಕೆ ನೆನಪಿಸುವುದಾಗಿ ಹೇಳಿದರು. ಬಿಜೆಪಿ ಪಕ್ಷಕ್ಕೆ ಸೇರಲು ತನ್ನನ್ನು ಸಂಪರ್ಕಿಸಿದೆ ಎಂಬ ಹೇಳಿಕೆಯನ್ನು ಸತ್ಯಗಳೊಂದಿಗೆ ಪ್ರತಿಕ್ರಿಯಿಸುವಂತೆ ಆಯೋಗ ಅತಿಶಿ ಅವರಿಗೆ ಸೂಚಿಸಿದೆ. ಅವರ ಹೇಳಿಕೆ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು.