ಅಮೇರಿಕ:
ಭೂಮಿಯ ಎಲ್ಲಾ ಸಾಗರಗಳ ನೀರನ್ನು ಒಟ್ಟುಗೂಡಿಸಿದರೆ ಅದಕ್ಕಿಂತ ಮೂರು ಪಟ್ಟು ಗಾತ್ರದ ಬೃಹತ್ ಸಾಗರವನ್ನು ಕಂಡುಹಿಡಿಯಲಾಗಿದೆ. ಭೂಗತ ನೀರಿನ ಮೂಲವು ನೀರಿನ ಮೇಲ್ಮೈಗಿಂತ 700 ಕಿ.ಮೀ ಆಳದಲ್ಲಿದ್ದು ಅಮೆರಿಕದ ಇಲಿನಾಯ್ಸ್ ರಾಜ್ಯದ ನಾರ್ಥ್‍ವೆಸ್ಟರ್ನ್ ವಿವಿಯ ವಿಜ್ಞಾನಿಗಳು ಈ ಗಮನಾರ್ಹ ಆವಿಷ್ಕಾರವನ್ನು ಮಾಡಿದ್ದಾರೆ.
ಭೂಮಿಯ ನೀರಿನ ಮೂಲವನ್ನು ಪತ್ತೆಹಚ್ಚಲು ನಡೆಸಿದ ಸಂಶೋಧನೆಯಲ್ಲಿ ಭೂಮಿಯ ಹೊದಿಕೆಗೊಳಗೆ ಆಳದಲ್ಲಿ ಒಂದು ಬೃಹತ್ ಸಾಗರ ಅಡಗಿರುವುದು ಬೆಳಕಿಗೆ ಬಂದಿದೆ. ರಿಂಗ್‍ವುಡೈಟ್ ಎಂದು ಕರೆಯಲ್ಪಡುವ ನೀಲಿಬಣ್ಣದ ಬಂಡೆಯೊಳಗೆ ಹುದುಗಿಕೊಂಡಿರುವ ಈ ಗುಪ್ತ ಸಾಗರವು, ಭೂಮಿಯ ನೀರಿನ ಮೂಲದ ಕುರಿತ ನಮ್ಮ ತಿಳುವಳಿಕೆಯನ್ನು ಧಿಕ್ಕರಿಸುತ್ತದೆ.
ಈ ಗುಪ್ತಸಾಗರದ ಪ್ರಮಾಣವು ಭೂಮಿಯ ಜಲಚಕ್ರದ ಮರು ಮೌಲ್ಯಮಾಪನಕ್ಕೆ ಪ್ರೇರಣೆಯಾಗಿದ್ದು ಧೂಮಕೇತುವಿನ ಪ್ರಭಾವಗಳನ್ನು ಪ್ರತಿಪಾದಿಸುವ ಸಿದ್ಧಾಂತಕ್ಕೆ ವಿರುದ್ಧವಾಗಿದೆ. `ಇದು ಭೂಮಿಯ ನೀರು ಆಂತರಿಕವಾಗಿ ಹುಟ್ಟಿಕೊಂಡಿದೆ ಎಂಬ ಕಲ್ಪನೆಯನ್ನು ಬೆಂಬಲಿಸುವ ಗಮನಾರ್ಹ ಪುರಾವೆಯಾಗಿದೆ. ಜಲಾಶಯ ಇಲ್ಲದಿದ್ದರೆ ಮತ್ತು ಈ ಎಲ್ಲಾ ನೀರು ಮೇಲ್ಮೈಗೆ ಬಂದರೆ ಆಗ ಗೋಚರಿಸುವ ಏಕೈಕ ಭೂಮಿ ಪರ್ವತಗಳ ಶಿಖರಗಳಾಗಿರಬಹುದು’ ಎಂದು ಸಂಶೋಧನಾ ಕಾರ್ಯದ ನೇತೃತ್ವ ವಹಿಸಿದ್ದ ನಾರ್ಥ್‍ವೆಸ್ಟರ್ನ್ ವಿವಿಯ ಸಂಶೋಧಕ ಸ್ಟೀವನ್ ಜಾಕೊಬ್ಸನ್ ಪ್ರತಿಪಾದಿಸಿದ್ದಾರೆ.
ತಮ್ಮ ಅಧ್ಯಯನದಲ್ಲಿ ಸಂಶೋಧಕರು ಅಮೆರಿಕದಾದ್ಯಂತ 2000 ಭೂಕಂಪಸೂಚಕ ಯಂತ್ರಗಳ ಶ್ರೇಣಿಯ ಸಹಾಯ ಪಡೆದರು. ಭೂಕಂಪನದಿಂದ ಉಂಟಾಗುವ ಭೂಕಂಪನ ಅಲೆಗಳು ಆದ್ರ ಬಂಡೆಯ ಮೂಲಕ ಹಾದುಹೋಗುವಾಗ ಭೂಮಿಯ ಒಳಪದರಗಳ ಮೂಲಕ ಚಲಿಸುವ ಅಲೆಗಳು ನಿಧಾನವಾಗುವುದು ಈ ಅಗಾಧವಾದ ಜಲರಾಶಿಯ ಉಪಸ್ಥಿತಿಗೆ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ.