ಹೈಕೋರ್ಟ್‌ : 5 ನ್ಯಾಯಮೂರ್ತಿಗಳ ಸೇವೆ ಖಾಯಂಗೊಳಿಸಿದ ಕೊಲಿಜಿಯಂ

ಬೆಂಗಳೂರು:

    ರಾಜ್ಯ ಹೈಕೋರ್ಟ್ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಐವರು ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಿ ಸುಪ್ರೀಂಕೋರ್ಟ್ ಕೊಲಿಜಿಯಂ ಅಧಿಸೂಚನೆ ಹೊರಡಿಸಿದೆ.

     ನ್ಯಾಯಮೂರ್ತಿಗಳಾದ ಸಿ ಎಂ ಪೂಣಚ್ಚ, ಅನಿಲ್‌ ಭೀಮಸೇನ ಕಟ್ಟಿ, ಚಂದ್ರಶೇಖರ್‌ ಮೃತ್ಯಂಜಯ ಜೋಶಿ, ಉಮೇಶ್‌ ಎಂ. ಅಡಿಗ ಮತ್ತು ಟಿ ಜಿ ಶಿವಶಂಕರೇಗೌಡ ಅವರನ್ನು ಅಧಿಕಾರವಹಿಸಿಕೊಳ್ಳುವ ದಿನದಿಂದ ಅನ್ವಯವಾಗುವಂತೆ ಕಾಯಂಗೊಳಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಜಿ ಬಸವರಾಜ ಅವರನ್ನು 2024ರ ಆಗಸ್ಟ್‌ 16ರಿಂದ ಅನ್ವಯವಾಗುವಂತೆ ಮತ್ತೆ ಒಂದು ವರ್ಷ ಹೊಸದಾಗಿ ಹೆಚ್ಚುವರಿ ನ್ಯಾಯಮೂರ್ತಿ ಹುದ್ದೆಯಲ್ಲಿ ಮುಂದುವರಿಸಲಾಗಿದೆ ಎಂದು ಪ್ರತ್ಯೇಕವಾಗಿ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಜಗನ್ನಾಥ್‌ ಶ್ರೀನಿವಾಸನ್‌ ತಿಳಿಸಿದ್ದಾರೆ. 

   ನಾಳೆ ಹೈಕೋರ್ಟ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಕಾಯಂಗೊಂಡಿರುವ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಕೆ ಎಸ್‌ ಭರತ್‌ ಕುಮಾರ್‌ “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದ್ದಾರೆ.

ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯೂ ಸೇರಿ 51 ನ್ಯಾಯಮೂರ್ತಿಗಳಿದ್ದಾರೆ. ಸದ್ಯ ಐವರು ನ್ಯಾಯಮೂರ್ತಿಗಳನ್ನು ಕಾಯಂಗೊಳಿಸಿರುವುದರಿಂದ 44 ಮಂದಿ ಕಾಯಂ ನ್ಯಾಯಮೂರ್ತಿಗಳು ಹಾಗೂ ಏಳು ಮಂದಿ ಹೆಚ್ಚುವರಿ ನ್ಯಾಯಮೂರ್ತಿಗಳು ಇದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link