ನವದೆಹಲಿ:
ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲು ಸಜ್ಜಾಗಿದ್ದ ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಇದೀಗ ತಮ್ಮ ಈ ಪ್ರವಾಸವನ್ನು ಮುಂದೂಡಿದ್ದಾರೆ. ಕಳೆದ ವಾರ ಭಾರತಕ್ಕೆ ಭೇಟಿ ನೀಡುವ ಕುರಿತು ಖಚಿತ ಪಡಿಸಿದ್ದ ಅವರು, ಇದೀಗ ತಮ್ಮ ಪ್ರವಾಸ ರದ್ದುಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ದೃಢಪಡಿಸಿದ್ದಾರೆ.
ದುರಾದೃಷ್ಟವಶಾತ್ ಟೆಸ್ಲಾ ಬಾದ್ಯತೆಗಳ ಹಿನ್ನಲೆ ಭಾರತಕ್ಕೆ ಭೇಟಿ ನೀಡುವುದನ್ನು ಮುಂದೂಡುವ ಅಗತ್ಯ ಏರ್ಪಟಿದೆ. ಈ ವರ್ಷಾಂತ್ಯದಲ್ಲಿ ಭಾರತ ಪ್ರವಾಸ ಕುರಿತು ಯೋಚಿಸಲಾಗುವುದು’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಈ ಮೊದಲು ವಿಶ್ವದ ಬಿಲೇನಿಯರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿ ಈ ತಿಂಗಳು ನಿಗದಿಯಾಗಿತ್ತು. ಈ ಕುರಿತು ಕಳೆದ ವಾರ ಟೆಸ್ಲಾ ಸಂಸ್ಥಾಪಕ ಕೂಡ ಎಕ್ಸ್ನಲ್ಲಿ ಖಚಿತಪಡಿಸಿದ್ದರು. ಈ ಭೇಟಿಯ ಮೂಲ ಉದ್ದೇಶ ಭಾರತದಲ್ಲಿ ಟೆಸ್ಲಾ ಇವಿ ಘಟಕ ಸ್ಥಾಪನೆಯಾಗಿತ್ತು.
ಇದರ ಜೊತೆ ದೇಶದಲ್ಲಿ ತಮ್ಮ ಸಾಟಲೈಟ್ ಇಂಟರ್ನೆಟ್ ಸೇವೆ ಸ್ಟಾರ್ಲಿಂಕ್ ಪ್ರವೇಶ ಕುರಿತು ಕೂಡ ಚರ್ಚಿಸಲಿದ್ದಾರೆ ಎನ್ನಲಾಗಿತ್ತು. ಪ್ರಧಾನಿ ಭೇಟಿ ಹೊರತಾಗಿ ಮಸ್ಕ್ ಭಾರತೀಯ ಬಾಹ್ಯಾಕಾಶ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದರು.
ಟೆಸ್ಲಾ, ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆಯಾಗಿದ್ದು, ಅಮೆರಿಕ ಮತ್ತು ಚೀನಾದಲ್ಲಿ ಮಾರಾಟದ ನಿಧಾನಗತಿಯ ಮಧ್ಯೆ ಹೊಸ ಮಾರುಕಟ್ಟೆಗಳನ್ನು ಹುಡುಕುತ್ತಿದೆ. ಭಾರತವು ಟೆಸ್ಲಾಗೆ ಸಂಭಾವ್ಯ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ವಿಶೇಷವಾಗಿ ಸ್ಥಳೀಯವಾಗಿ ಹೂಡಿಕೆ ಮಾಡುವ ಕಂಪನಿಗಳ ಆಮದು ಮಾಡಿಕೊಂಡ ಕಾರುಗಳ ಮೇಲಿನ ತೆರಿಗೆಗಳನ್ನು ಸರ್ಕಾರ ಕಡಿಮೆ ಮಾಡಿದ ನಂತರ ಭಾರತದಲ್ಲಿ ಇಂಪೋರ್ಟೆಡ್ ಕಾರುಗಳ ಮಾರುಕಟ್ಟೆ ವ್ಯಾಪಿಸಿದೆ.
ಇದೇ ಕಾರಣಕ್ಕೆ ಟೆಸ್ಲಾ ಸಂಸ್ಥೆ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಲು ಹವಣಿಸುತ್ತಿದೆ. ಟೆಸ್ಲಾ ಮಾತ್ರವಲ್ಲದೇ ಮಸ್ಕ್ ಒಡೆತನದ ಸ್ಟಾರ್ಲಿಂಕ್ ಕೂಡ ಭಾರತದಲ್ಲಿ ಕಾರ್ಯನಿರ್ವಹಿಸಲು ಆರಂಭಿಕ ಅನುಮೋದನೆಗಳನ್ನು ಪಡೆಯಲು ಈ ಹಿಂದೆ ಭಾರತೀಯ ಕಂಪನಿಗಳಲ್ಲಿ ವಿದೇಶಿ ಹೂಡಿಕೆದಾರರಿಗೆ ಪ್ರವೇಶ ಮಾರ್ಗಗಳನ್ನು ಉದಾರಗೊಳಿಸಲು ಬಾಹ್ಯಾಕಾಶ ವಲಯದಲ್ಲಿ ತನ್ನ ವಿದೇಶಿ ನೇರ ಹೂಡಿಕೆ ನೀತಿಗೆ ಬದಲಾವಣೆಗಳನ್ನು ಕೇಂದ್ರ ಸರ್ಕಾರ ಸೂಚಿಸಿತು.