ಹಾಸನ:
ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಅದರಂತೆ ಕರಡಿ ಹೆಸರಿನ ಕಾಡಾನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿತ್ತು. ಇದರ ಬೆನ್ನಲ್ಲೇ ಇದೀಗ ಸೀಗೆ ಗುಡ್ಡ ಹೆಸರಿನ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಭಿಮನ್ಯು ನೇತೃತ್ವದಲ್ಲಿ ಎಂಟು ಆನೆಗಳನ್ನು ಹೆತ್ತೂರು ಭಾಗಕ್ಕೆ ಕರೆದೊಯ್ಯಲಾಗಿತ್ತು. ಸೀಗೆ ಗುಡ್ಡ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆಯನ್ನು ನಿನ್ನೆ ಕೈಗೊಳ್ಳಲಾಗಿತ್ತು. ಆದರೆ ಡಾಟ್ ಮಾಡಲು ಸೀಗೆ ಗುಡ್ಡ ಕಾಡಾನೆ ಸಿಗದ ಹಿನ್ನೆಲೆಯಲ್ಲಿ ನಿನ್ನೆಯ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು.
ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಸೀಗೆ ಗುಡ್ಡ ಆನೆಯನ್ನು ಸೆರೆಹಿಡಿದು ದುಬಾರೆ ಆನೆ ಶಿಬಿರಕ್ಕೆ ಕರೆದೊಯ್ದಿದ್ದಾರೆ.